ಚಿಂಚೋಳಿ: ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿ ಕೊಂಡಿರುವ ಕುಂಚಾವರಂ, ವೆಂಕಟಾಪುರ, ಶಾದೀಪುರ ಸುತ್ತಲಿನ ಗ್ರಾಮ ಮತ್ತು ತಾಂಡಾಗಳಲ್ಲಿನ ಮಹಿಳೆಯರು, ಯುವಕರು ಸ್ವಾವಲಂಬಿ ಜೀವನ ಸಾಗಿಸಲು ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಸಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಒತ್ತು ನೀಡಬೇಕು ಎಂದು ಶಾಸಕ ಡಾ| ಅವಿನಾಶ ಜಾಧವ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕೊಳ್ಳೂರ ಗ್ರಾಮದ ಪಾರ್ವತಿ ಪರಮೇಶ್ವರ ದೇವಸ್ಥಾನ ಹತ್ತಿರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ 22ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾಂಸ್ಕೃತಿಕ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಸಂಘಕ್ಕೆ ಸಾಕಷ್ಟು ಅನುದಾನ ನೀಡಿದ್ದರಿಂದ ಅನೇಕ ಗ್ರಾಮಗಳಲ್ಲಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ರಾಜ್ಯಸಭೆ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಅನೇಕ ಪ್ರಗತಿ ಕಾರ್ಯಗಳನ್ನು ಸಂಘದ ಮೂಲಕ ನಮ್ಮ ಭಾಗದಲ್ಲಿ ನಡೆಸುತ್ತಿದ್ದಾರೆ. ಚಿಂಚೋಳಿ ತಾಲೂಕಿನ ಕುಂಚಾವರಂ ಗಡಿಪ್ರದೇಶದಲ್ಲಿ ತಾಂಡಾ, ಗ್ರಾಮಗಳಲ್ಲಿ ಅನೇಕ ಮಹಿಳೆಯರು, ಯುವತಿಯರಿಗೆ, ನಿರುದ್ಯೋಗಿ ಯುವಕರಿಗೆ ವಿವಿಧ ತರಬೇತಿಗಳನ್ನು ಕೊಡಿಸಲು ಅಲ್ಲಿಯೇ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುವುದು ಅಗತ್ಯವಾಗಿದೆ. ಏಕೆಂದರೆ ನಿರುದ್ಯೋಗ ಬಡತನ, ಅನಕ್ಷರತೆ, ಮೂಢನಂಬಿಕೆಗಳಂತ ಸಂಪ್ರದಾಯ ಹೆಚ್ಚಾಗಿದೆ ಎಂದರು.
ಮಾಜಿ ಸಚಿವ ದಿ| ವೈಜನಾಥ ಪಾಟೀಲ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಒದಗಿಸಲು 371ನೇ (ಜೆ)ಅನುಷ್ಠಾನಕ್ಕೆ ನಡೆಸಿದ ಹೋರಾಟದ ಪ್ರತಿಫಲವಾಗಿ ತಮಗೆ ವೈದ್ಯಕೀಯ ಸೀಟು, ಎಂಡಿ ಸ್ಥಾನ ದೊರಕಿದೆ ಎಂದು ಸ್ಮರಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘಕ್ಕೆ ಬಿಜೆಪಿ ಸರ್ಕಾರವು 500 ಕೋಟಿ ರೂ. ಅನುದಾನ ನೀಡಿರುವುದರಿಂದ ಪ್ರಗತಿ ಆಗುತ್ತಿದೆ ಎಂದರು.
ಸಂಚಾಲಕ ಕಾಶಿನಾಥ ಮಡಿವಾಳ ಸಂಘದ ಕಾರ್ಯ ಚಟುವಟಿಕೆ ಕುರಿತು ತಿಳಿಸಿದರು. ಮುಖಂಡರಾದ ಶಾಂತರೆಡ್ಡಿ, ಖಂಡೇರಾವ್ ಕುಲಕರ್ಣಿ, ಮಹಿಪಾಲರೆಡ್ಡಿ ಪಾಟೀಲ, ತೇಜುನಾಯಕ, ಹಣಮಂತರೆಡ್ಡಿ, ಭೀಮರೆಡ್ಡಿ, ಭೀಮಶೆಟ್ಟಿ ಮುರುಡಾ, ಶ್ರೀಮಂತ ಕಟ್ಟಿಮನಿ, ಶಾಮರಾವ್ ಕೊರವಿ, ಜಗನ್ನಾಥ ಚಂಡ್ರಸಿ, ಸಂತೋಷರಡ್ಡಿ ಇನ್ನಿತರರಿದ್ದರು. ಗೋಪಾಲರೆಡ್ಡಿ ಸ್ವಾಗತಿಸಿದರು, ಆಕಾಶ ಕೊಳ್ಳುರ ವಂದಿಸಿದರು.