ಹಾವೇರಿ: ಪ್ರವಾಹ ಸಂತ್ರಸ್ತರಿಗೆ ವಾರದೊಳಗಾಗಿ ಪರಿಹಾರ ನೀಡಬೇಕು. ರಾಣಿಬೆನ್ನೂರು ತಾಲೂಕನ್ನು ಪ್ರವಾಹ ಪೀಡಿತ ಎಂದು ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದಿಂದ ಗುರುವಾರ ಇಲ್ಲಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.
ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ 15 ದಿನಗಳಿಂದ ಸತತವಾಗಿ ಮಳೆಯಾಗಿ ಕರೆಕಟ್ಟೆ ತುಂಬಿ, ನದಿಗಳಲ್ಲಿ ಪ್ರವಾಹ ಬಂದು ನೂರಾರು ಗ್ರಾಮಗಳು ಜಲಾವೃತವಾಗಿ ಎರಡು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅನೇಕರು ಮೃತಪಟ್ಟಿದ್ದು, ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜಿಲ್ಲೆಯಲ್ಲಿ ನೆರೆ ಬಂದು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಆದ್ದರಿಂದ ಹಾನಿಯಾದ ಒಂದು ಎಕರೆ ಗೋವಿನಜೋಳಕ್ಕೆ 30 ಸಾವಿರ ರೂ., ಭತ್ತಕ್ಕೆ 40 ಸಾವಿರ ಹಾಗೂ ಇನ್ನಿತರ ಬೆಳೆಗಳಿಗೂ ಯೋಗ್ಯ ಪರಿಹಾರ ಕೊಡಬೇಕು. ತೋಟಗಾರಿಕಾ ಬೆಳೆಗಳಿಗೆ ಎಕರೆಗೆ 60 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ರೈತರ ಕಟ್ಬಾಕಿ, ಚಾಲ್ತಿ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಶೀಘ್ರದಲ್ಲಿ ಸಂಪುಟ ರಚನೆ ಮಾಡಿ ಸುವರ್ಣಸೌಧದಲ್ಲಿ 15 ದಿನಗಳ ವಿಶೇಷ ಅವೇಶನ ನಡೆಸಬೇಕು. ಅವೇಶನದಲ್ಲಿ ಒಂದು ದಿನ ರೈತರ ಸಭೆ ಕರೆದು ಚರ್ಚಿಸಬೇಕು. ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ 39 ಸಾವಿರ ಎಕರೆ ಅರಣ್ಯ ಭೂಮಿಯನ್ನು ಮೂರು ತಲೆಮಾರುಗಳಿಂದ 12 ಸಾವಿರ ಕುಟುಂಬಗಳು ಸಾಗುವಳಿ ಮಾಡಿಕೊಂಡು ಬರುತ್ತಿವೆ. ಆದರೆ, ರೈತರಿಗೆ ಹಕ್ಕು ಪತ್ರ ನೀಡಲು 75 ವರ್ಷಗಳ ದಾಖಲೆ ತೋರಿಸಬೇಕು ಎಂದು ಕೇಂದ್ರ ಸರ್ಕಾರದ ಕಾಯ್ದೆ ಹೇಳುತ್ತಿರುವುದು ಅವೈಜ್ಞಾನಿಕ. ಸಾಗುವಳಿ ಮಾಡುತ್ತಿರುವುದರ ಆಧಾರದಲ್ಲಿ ಹಕ್ಕು ಪತ್ರ ನೀಡಬೇಕು. ಬಗರ್ ಹುಕುಂ ಜಮೀನು ಸಾಗುವಳಿ ಮಾಡಿದ ರೈತರಿಗೆ ಬ ಕರಾಬ್ ಎಂದು ಹಕ್ಕು ಪತ್ರ ನೀಡುತ್ತಿಲ್ಲ. ಈ ಕುರಿತು ಪರಿಶೀಲನೆ ನಡೆಸಿ 1ರಿಂದ 2 ಎಕರೆ ಸಾಗುವಳಿ ಮಾಡಿದ ರೈತರಿಗೆ ಭೂಮಿ ಹಕ್ಕುಪತ್ರ ನೀಡಬೇಕು. ಅರಣ್ಯ ಭೂಮಿ ಬಗರ್ ಹುಕುಯಂ ಸಾಗುವಳಿ ಮಾಡಿದ ರೈತರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ. ಆ ರೈತರಿಗೂ ಸರ್ಕಾರ ಪರಿಹಾರ ಕೊಡಬೇಕು. ಅಕ್ರಮ ಸಕ್ರಮ ಸಮಿತಿ ರದ್ದುಗೊಳಿಸಿ ಆಯುಕ್ತರನ್ನು ನೇಮಕ ಮಾಡಿ ಭೂಮಿ ಹಕ್ಕುಪತ್ರ ಕೊಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಈ ಕುರಿತು ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಹನುಮಂತಗೌಡ ದೀವಗಿಹಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ, ಪದಾಧಿಕಾರಿಗಳಾದ ಚಂದ್ರಶೇಖರ ಉಪ್ಪಿನ, ಫಕ್ಕೀರೇಶ ಕಾಳಿ, ಫಕ್ಕೀರಗೌಡ ಗಾಜಿಗೌಡ್ರ, ಹೊನ್ನಪ್ಪ ಸಣ್ಣಬಾರ್ಕಿ, ಜಗದೀಶ ಕುಸಗೂರ, ಶಿವಾನಂದಪ್ಪ ಮತ್ತಿಹಳ್ಳಿ, ಶಂಕರರಾವ್ ಕುಲಕರ್ಣಿ ಇತರರು ಇದ್ದರು.