Advertisement

ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ: ಪಾಟೀಲ

06:23 PM Sep 22, 2020 | Suhan S |

ಚಿಂಚೋಳಿ: ಸೇಡಂ ಮತ್ತು ಚಿಂಚೋಳಿ ವಿಧಾನಸಭಾ ಮತಕ್ಷೇತ್ರಗಳ ಅನೇಕ ಹಳ್ಳಿಗಳಲ್ಲಿ ಸಾಕಷ್ಟು ಮಳೆ ಸುರಿದ ಪರಿಣಾಮ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಸಂತ್ರಸ್ತರಿಗೆ ಇನ್ನುವರೆಗೆ ಪರಿಹಾರ ನೀಡಿಲ್ಲ. ಶಾಸಕರು, ಸಚಿವರು ಕೇವಲ ಕುರ್ಚಿ ಉಳಿಸಿಕೊಳ್ಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಬಿಜೆಪಿ ಸರಕಾರ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ ತಾಲೂಕಿನ ರುದನೂರ, ಚಿಂತಪಳ್ಳಿ, ಭೂತಪೂರ, ರಾಯಕೋಡ, ಕೆರೊಳಿ ಗ್ರಾಮಗಳಲ್ಲಿ ರವಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅನೇಕ ಮನೆಗಳಿಗೆ ಹಳ್ಳಕೊಳ್ಳ, ನಾಲಾಗಳ ನೀರು ನುಗ್ಗಿ ಹಾನಿಯ ಕುರಿತು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಮತ್ತು ಸೇಡಂ ತಾಲೂಕುಗಳಲ್ಲಿ ದಾಖಲೆಮಳೆ ಸುರಿಯುತ್ತಿದೆ. ಸೇಡಂ ಮತ್ತು  ಚಿಂಚೋಳಿಯ ಅನೇಕ ಗ್ರಾಮಗಳಲ್ಲಿ ರೈತರು ಬೆಳೆದ ಮುಂಗಾರು ಬೆಳೆಗಳು ಮಳೆನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರೈತರು ರಾಶಿಗಾಗಿ ಸಂಗ್ರಹಣೆ ಮಾಡಿದ ಹೆಸರು, ಉದ್ದಿನ ಕಾಯಿಗಳಲ್ಲಿ ಮೊಳಕೆಯೊಡೆದಿವೆ. ಮನೆ ಕಳೆದುಕೊಂಡ ಕುಟುಂಬಗಳಿಗೆ 10 ಸಾವಿರ ರೂ. ಮತ್ತು ಬೆಳೆ ಹಾನಿಗೊಳದ ರೈತರ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರ ತಕ್ಷಣವೇ ಘೋಷಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಸರಕಾರ ಬಡವರ ಮತ್ತು ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಚಿಂತಪಳ್ಳಿ, ರಾಯಕೋಡ, ರುದನೂರ, ಭೂತಪೂರ, ಕೆರೋಳಿ, ಭಂಟನಳ್ಳಿ ಗ್ರಾಮಗಳಲ್ಲಿ ರವಿವಾರ ರಾತ್ರಿವಿಡೀ ದಾಖಲೆ ಮಳೆ ಸುರಿದ ಪರಿಣಾಮ ಅನೇಕರ ಮನೆಗಳಿಗೆ ನೀರು ನುಗ್ಗಿದೆ. ಸಾಕಷ್ಟು ಪ್ರಮಾಣದಲ್ಲಿ ದವಸ ಧಾನ್ಯಗಳು, ಆಹಾರ ಪದಾರ್ಥಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಸರಕಾರ ತಕ್ಷಣವೇ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಕಳೆದ ವರ್ಷ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹರಿದು ಬಿಟ್ಟ ನೀರಿನ ಪ್ರವಾಹದಿಂದ ಅನೇಕ ತಾಲೂಕಿನಲ್ಲಿ ಹಾನಿ ಸಂಭವಿಸಿದ್ದರಿಂದ ಪ್ರತಿಯೊಂದು ಕುಟುಂಬಕ್ಕೆ ತಕ್ಷಣ 5 ಸಾವಿರ ರೂ. ಪರಿಹಾರ ನೀಡಲಾಗಿದೆ. ಅದರಂತೆ ನಮ್ಮ ಭಾಗದಲ್ಲಿ ಉಂಟಾದ ಹಾನಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಬೆಳಗಾವಿ ಮಾದರಿಯಲ್ಲಿ ಸರಕಾರದಿಂದ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.

ಬಸವರಾಜ ಕೆರೋಳಿ, ಸುರೇಶ ಪಾಟೀಲ, ಅರ್ಜುನಕ್ರಾಂತಿ, ವಿಶ್ವನಾಥ ಪಾಟೀಲ, ಕಾಶಿನಾಥ ಜಮಾದಾರ, ಲಿಂಗದೇವಯ್ಯ ಸ್ವಾಮಿ, ರಾಮಲಿಂಗ ಯಲಬಾವಿ, ಶರಣಪ್ಪ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next