Advertisement

ಝಾಡಮಾಲಿಗಳಿಗೆ ಪುನರ್ವಸತಿ ಒದಗಿಸಿ

11:46 AM Dec 31, 2019 | Suhan S |

ದಾವಣಗೆರೆ: ಮ್ಯಾನ್ಯುಯಲ್‌ ಸ್ಕಾವೆಂಜರ್ಸ್‌ಗಳಿಗೆ ಪುನವರ್ಸತಿ ಒದಗಿಸುವ ಪುನವರ್ಸತಿ ಕಾಯ್ದೆ-2013ರ ಸಮರ್ಪಕ ಜಾರಿ, ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಬಿ. ಓಬಳೇಶ್‌ ತಿಳಿಸಿದ್ದಾರೆ.

Advertisement

ಆಧುನಿಕ ಯುಗದಲ್ಲೂ ಇರುವ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಮಾಡುವ ಜೊತೆಗೆ ಆ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಪುನವರ್ಸತಿ ಒದಗಿಸಬೇಕು. ಸ್ಥಳೀಯ ಸಂಸ್ಥೆಯಲ್ಲಿನ ಪೌರ ಕಾರ್ಮಿಕರನ್ನ ಖಾಯಂ ಮಾಡಬೇಕು ಎಂದು ರಾಜ್ಯವ್ಯಾಪಿ ಎರಡು ಹಂತದಲ್ಲಿ ಜಾಗೃತಿ ಆಂದೋಲನ ನಡೆಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ 3 ಸಾವಿರ ಮ್ಯಾನ್ಯುಯಲ್‌ ಸ್ಕಾವೆಂಜರ್ಸ್ ಗಳನ್ನು ಗುರುತಿಸಲಾಗಿದೆ. ಈವರೆಗೆ ಪುನವರ್ಸತಿ ಕಾಯ್ದೆ-2013ರಡಿ ಪುನವರ್ಸತಿ ಒದಗಿಸಿಲ್ಲ. ಕಳೆದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿರುವ 1 ಲಕ್ಷ ಅನುದಾನವನ್ನೂ ಬಳಸಲಾಗಿಲ್ಲ. ಪರ್ಯಾಯ ಉದ್ಯೋಗಕ್ಕೂ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ದೂರಿದರು.

ಜಿಲ್ಲಾ ಕಾವಲು ಸಮಿತಿಯ ಆರ್‌.ವಿ. ಚಂದ್ರಶೇಖರ್‌ ಮಾತನಾಡಿ, ಜಿಲ್ಲೆಯಲ್ಲಿ ಮ್ಯಾನ್ಯುಯಲ್‌ ಸ್ಕಾವೆಂಜರ್ಸ್‌ ಕುಟುಂಬಗಳ ಸಮೀಕ್ಷಾ ಕಾರ್ಯಕ್ಕೆ ಆಯಾಯ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳನ್ನ ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ದಾವಣಗೆರೆಯಲ್ಲಿ ಜ.10, ಹೊನ್ನಾಳಿಯಲ್ಲಿ 6, ಚನ್ನಗಿರಿಯಲ್ಲಿ 7, ಹರಿಹರದಲ್ಲಿ 8, ಜಗಳೂರಿನಲ್ಲಿ 9 ರಂದು ಸಮೀಕ್ಷೆ ನಡೆಯಲಿದೆ. ಅಧಿಕಾರಿಗಳು ಸಮೀಕ್ಷೆಗೆ ಬಂದಾಗ ಸಮಗ್ರ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಡಿ.ಎಸ್‌. ಬಾಬಣ್ಣ, ಉಚ್ಚೆಂಗೆಪ್ಪ, ಮ್ಯಾಥು ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next