ಮಾಗಡಿ: ಪ್ರತಿಭಾವಂತ ಮಕ್ಕಳ ಜೊತೆಗೆ ಅನಕ್ಷರಸ್ಥ ಬಡ ಕುಟುಂಬದ ಮಕ್ಕಳನ್ನು ಗುರುತಿಸಿ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಈ ಮೂಲಕ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದಾಗ ಮಾತ್ರ ಪ್ರತಿಭಾ ಪುರಸ್ಕಾರಕ್ಕೆ ಸಾರ್ಥಕವಾಗುತ್ತದೆ. ಎಂದು ಸರ್ಕಾರಿ ಪ್ರೌಢಶಾಲಾ ಶಿಕ್ಷಣ ಮಂಡಲಿ ಸಹ ಕಾರ್ಯದರ್ಶಿ ಕೋದಂಡರಾಮಯ್ಯ ಸಲಹೆ ನೀಡಿದರು.
ಪಟ್ಟಣದ ವಾಸವಿ ವಿದ್ಯಾನಿಕೇತನ ಶಾಲಾ ಸಭಾಂಗಣದಲ್ಲಿ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ನಡೆದ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ಮೊದಲು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಈ ಮೂಲಕ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಾಲೆಯಲ್ಲಿ ಎಲ್ಲಾ ಮಕ್ಕಳು ಒಂದೇ ಎಂಬ ಭಾವನೆ ಶಿಕ್ಷಕರಲ್ಲಿರಬೇಕು. ಪ್ರಸ್ತುತ ಸಾಲಿನ ವರ್ಷದಲ್ಲಿ ರಾಮನಗರ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ. ಮುಂದಿನ ವರ್ಷದಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲಬೇಕು ಎಂದು ತಿಳಿಸಿದರು.
ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ: ಶಿಕ್ಷಣ ಪರೀಕ್ಷಾ ಮಂಡಲಿ ಕಾರ್ಯದರ್ಶಿ ಕೆಂಪರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಆದ್ದರಿಂದಲೇ ಪ್ರತಿವರ್ಷವೂ ಎಸ್‌ಎಸ್‌ಎಲ್ಸಿಯಲ್ಲಿ ಫಲಿತಾಂಶವೂ ಹೆಚ್ಚಾಗುತ್ತಿದೆ. ಪರೀಕ್ಷೆ ಎಂಬ ಭಯ ಮಾಯವಾಗಿದೆ. ಎಸ್‌ಎಸ್‌ಎಲ್ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆಯಾಗಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿಯೂ ಕಡಿಮೆಯಾಗಬಹುದು. ಅದಕ್ಕಾಗಿ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ತರಬೇತಿ ಕೊಡುವುದರಿಂದ ಪರೀಕ್ಷೆಯನ್ನು ಸುಲಭವಾಗಿ ಎದುರಿಸುತ್ತಾರೆ. ವಿದ್ಯಾರ್ಥಿಗಳಿಗೆ ಪೂರಕವಾದ ಪ್ರಶ್ನೆಪತ್ರಿಕೆಗಳು ವೆಬ್‌ಸೈಟ್‌ನಲ್ಲಿ ಸಿಗುವಂತೆ ಮಂಡಲಿ ಕಲ್ಪಿಸಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕು. ಈ ಮೂಲಕ ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಹೇಳಿದರು.
ವಿಷಯ ಆಯ್ಕೆಗೆ ವಿದ್ಯಾರ್ಥಿಗಳಿಗೆ ಬಿಡಿ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೈರಲಿಂಗಯ್ಯ ಮಾತನಾಡಿ, ಉನ್ನತ ಶಿಕ್ಷಣ ಪಡೆಯಲು ವಿಷಯವಾರು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಬಿಡಬೇಕು. ಪೂರಕವಾಗಿ ಪೋಷಕರು ಸಹಕಾರ ನೀಡಬೇಕು. ಮನಸ್ಸನ್ನು ಕೇಂದ್ರೀಕರಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಆದರ್ಶ ವಿದ್ಯಾರ್ಥಿಗಳಾಗಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದೇಶ್ವರ್, ತಾಲೂಕು ಪ್ರೌಢಾಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್, ತಾಲೂಕು ಡಿವಿಜಿ ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್ ಗಂಗಾಧರ್, ಎಂ.ಜಿ.ಶಿವರಾಮಯ್ಯ ಮಾತನಾಡಿದರು.
ಪ್ರತಿಭಾ ಪುರಸ್ಕಾರ: ಈ ವೇಳೆ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಿದರು.
ವಾಸವಿ ವಿದ್ಯಾನಿಕೇತನ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್.ಜಿ.ರಮೇಶ್ ಗುಪ್ತಾ, ಕಾರ್ಯದರ್ಶಿ ಬಿ.ಎನ್.ರಾಜು, ಪ್ರಾಂಶುಪಾಲ ವಸಂತ ಕುಮಾರ್, ಶಿಕ್ಷಕರ ಸಂಘದ ರೇಣುಕಾರಾಧ್ಯ, ನಂಜಪ್ಪ, ಪ್ರಕಾಶ್, ಗೌರೀಶ್, ರುದ್ರಮೂರ್ತಿ, ಗಂಗಮಾರಯ್ಯ, ಎಸ್.ಸಿ.ಪ್ರಕಾಶ್, ರಮೇಶ್ ಸೇರಿದಂತೆ ಅನೇಕರು ಹಾಜರಿದ್ದರು.