ಬೀದರ: ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸಂಧ್ಯಾರಾಣಿ ರಾಮ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆಯಿತು. ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ನಡೆಯುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜಿಪಂ ಸದಸ್ಯರು ಹಾಗೂ ಸಮಿತಿ ಸದಸ್ಯರ ಗಮನಕ್ಕೆ ತರಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್. ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಿತಿ ಸದಸ್ಯರಾದ ಆನಂದ ವಿಠಲರಾವ್ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆಲವು ತಾಲೂಕು ಕಚೇರಿಗಳಲ್ಲಿ ಸಂಬಂಧವೇ ಇಲ್ಲದವರಿಗೆ ಪ್ರಭಾರ ನೀಡಿರುವುದು ಕಂಡುಬಂದಿದೆ. ಇವರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತದೆ. ಇಂತಹ ಅಧಿ ಕಾರಿಗಳನ್ನು ಬದಲಾಯಿಸಬೇಕು ಎಂದು ತಿಳಿಸಿದರು.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸದ ಕಾರಣದಿಂದ ಕೆಲವು ಮಕ್ಕಳು ರಸ್ತೆಗಳಲ್ಲಿ ಅಡ್ಡಾಡುತ್ತಿರುವುದು ಕಂಡು ಬರುತ್ತಿದೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರತಿಕ್ರಿಯಿಸಿ, ಮಹಿಳಾ ವಸತಿ ನಿಲಯಗಳು ಮತ್ತು ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಮಾತ್ರ ರಾತ್ರಿ ಕಾವಲುಗಾರರಿದ್ದಾರೆ. ಉಳಿದ ವಸತಿ ನಿಲಯಗಳಲ್ಲಿ ರಾತ್ರಿ ಕಾವಲುಗಾರರ ನೇಮಕಾತಿಗೆ ಅವಕಾಶವಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಕೆಲವು ವಸತಿ ನಿಲಯಗಳಲ್ಲಿ ಅವಶ್ಯಕತೆ ಇಲ್ಲದಿದ್ದರೂ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲೆಯ ಸಾಕಷ್ಟು ವಸತಿ ನಿಲಯಗಳನ್ನು ಬಾಡಿಗೆ ಮೇಲೆ ನಡೆಸಲಾಗುತ್ತಿದೆ. ಇಂತಹ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು ಎಂದು ಸಮಿತಿ ಸದಸ್ಯರು ತಿಳಿಸಿದರು. ಬಾಡಿಗೆಯಿಂದ ನಡೆಸಲಾಗುತ್ತಿರುವ ಕಡೆಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈ ಬಗ್ಗೆ ಸಮಿತಿ ಸದಸ್ಯರ ಗಮನಕ್ಕೆ ತರುವಂತೆ ಜಿಪಂ ಉಪ ಕಾರ್ಯದರ್ಶಿ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಸಮಿತಿ ಸದಸ್ಯರಾದ ಜಯಶ್ರೀ ಜೈಸಿಂಗ್ ರಾಠೊಡ್, ರೇಖಾಬಾಯಿ ನೀಲಕಂಠ, ರಾಜಶೇಖರ ಬಸವಣಪ್ಪ, ಅಂಬಾದಾಸ ಮನೋಹರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.