ವಿಜಯಪುರ: ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಆಗ್ರಹಿಸಿ ಆರೋಗ್ಯ ಸಚಿವ ಡಾ| ಕೆ.ಸುಧಾಕರ ಅವರಿಗೆ ಇಂಗಳೇಶ್ವರ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಇಂಗಳೇಶ್ವರ ಐತಿಹಾಸಿಕ, ಪೌರಾಣಿಕ ಹಿನ್ನೆಳೆಯುಳ್ಳ ಗ್ರಾಮ. 15 ಸಾವಿರ ಜನಸಂಖ್ಯೆ ಇರುವ ಇಂಗಳೇಶ್ವರ ದೊಡ್ಡ ಗ್ರಾಮವಾಗಿದೆ. ಈ ಬಗ್ಗೆ ಹಲವು ವರ್ಷಗಳಿಂದ ಆರೋಗ್ಯ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಬಸವನಬಾಗೇವಾಡಿ ಆಸ್ಪತ್ರೆ, ಕುದರಿಸಾಲವಾಡಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತು ಪಡಿಸಿದರೆ ಇಂಗಳೇಶ್ವರ ಗ್ರಾಮದ ಸುತ್ತಮುತ್ತ ಸರ್ಕಾರಿ ಆರೋಗ್ಯ ಸೇವೆಗಳಿಲ್ಲ. ಈ ಭಾಗದ ಹಳ್ಳಿಗಳು ಇಂಗಳೇಶ್ವರ ಗ್ರಾಮದ ಮೇಲೆ ಅವಲಂಬಿತವಾಗಿವೆ ಎಂದರು.
ಮಸಬಿನಾಳ, ಡೋಣೂರ, ಯಂಭತ್ನಾಳ, ನೇಗಿನಾಳ, ಹುಲ್ಲಾಳ, ಬಳ್ಳಾವೂರ, ಅರಳಿ ಚಂಡಿ, ಬಿಸನಾಳ, ಬೊಮ್ಮನಳ್ಳಿ, ಮಾರ್ಕಪ್ಪನಳ್ಳಿ, ಸಾತಿಹಾಳ, ರೆಬಿನಾಳ, ಉತ್ನಾಳ ಹಾಗೂ ದಿಂಡವಾರ ಸೇರಿದಂತೆ ಇನ್ನು ಹಲವಾರು ಹಳ್ಳಿಗಳು ಇಂಗಳೇಶ್ವರ ಗ್ರಾಮಕ್ಕೆ ಹತ್ತಿರದಲ್ಲಿವೆ. ಮಧ್ಯವರ್ತಿ ಗ್ರಾಮವಾಗಿರುವ ಇಲ್ಲಿಗೆ ಬಂದು ಹೋಗಲು ಅನುಕೂಲತೆಗಳೂ ಇವೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದು ಸೂಕ್ತ ಎಂದು ಆಗ್ರಹಿಸಿದರು.
ಆದರೆ ನಮ್ಮ ಭಾಗದಲ್ಲಿ ಆರೋಗ್ಯ ಕೇಂದ್ರ ಇಲ್ಲದ ಕಾರಣ ರಾತ್ರಿ ಸಮಯದಲ್ಲಿ ಜನರ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಚಿಕಿತ್ಸೆ ಸಿಗದೆ ತೊಂದರೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ರೋಗಿಗಳನ್ನು ಬಸವನಬಾಗೇವಾಡಿ, ವಿಜಯಪುರಕ್ಕೆ ಕರೆದೊಯ್ಯುವ ದುಸ್ಥಿತಿ ಇದೆ. ಇದರಿಂದ ಜನತೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇಂಗಳೇಶ್ವರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಚಿವ ಡಾ| ಸುಧಾಕರ, ರಾಜ್ಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವ ಸಂದರ್ಭದಲ್ಲಿ ಇಂಗಳೇಶ್ವರ ಗ್ರಾಮವನ್ನು ಆದ್ಯತೆಯಲ್ಲಿ ಪರಿಗಣಿಸುವುದಾಗಿ ಭರವಸೆ ನೀಡಿದರು.