ಅಥಣಿ: ಕೃಷ್ಣಾ ನದಿಗೆ ನೀರು ಹರಿಸುವಂತೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಅಥಣಿ ಬಂದ್ ಕರೆ ಕುರಿತು 30ಕ್ಕೂ ಹೆಚ್ಚು ಸಂಘಟನೆಗಳಿಂದ ಶನಿವಾರ ಅಥಣಿ ಉಪ ತಹಶೀಲ್ದಾರ್ ಬಿರಾದಾರ ಪಾಟೀಲ ಹಾಗೂ ಸಿಪಿಐ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸನಗೌಡ ಪಾಟೀಲ(ಬಮ್ನಾಳ) ಮಾತನಾಡಿ, ಪ್ರತಿ ಬಾರಿ ಕೃಷ್ಣಾ ನದಿಯಲ್ಲಿ ನೀರು ಬತ್ತಿ ಹೋದಾಗಲೊಮ್ಮೆ ರೈತರು ಮತ್ತು ವಿವಿಧ ಸಂಘಟನೆಗಳಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದಿವೆ ಹೊರತು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿಲ್ಲ. ಕಾರಣ ಈ ಬಾರಿ ಕೃಷ್ಣಾ ನದಿಗೆ ಶಾಶ್ವತ ನೀರು ಹರಿಸುವಂತಾಗಬೇಕು ಮತ್ತು ಸ್ಥಳೀಯ ಶಾಸಕ ಮಹೇಶ ಕುಮಠಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರು ಈ ಭಾಗದ ರೈತರ ಸಮಸ್ಯಗಳಿಗೆ ತಕ್ಷಣ ಸ್ಪಂದಿಸಿ ಶಾಶ್ವತ ನೀರಿನ ಪರಿಹಾರ ಕಂಡುಕೊಳ್ಳಲು ಮುಂದಾಗುವಂತೆ ಒತ್ತಾಯಿಸಿದರು.
ಸ್ಥಳೀಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಸುನೀಲ ಸಂಕ ಮಾತನಾಡಿ, ಶಾಶ್ವತ ಪರಿಹಾರಕ್ಕಾಗಿ ಪಕ್ಷಾತೀತವಾಗಿ ಸುಮಾರು 36 ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸಮಿತಿ ರಚಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಶಾಸಕರು ಹಾಗೂ ಕಾಗವಾಡ ಶಾಸಕರು ಮತ್ತು ಕೃಷ್ಣಾ ನದಿ ಪಾತ್ರದ ವ್ಯಾಪ್ತಿಗೆ ಬರುವ ಎಲ್ಲ ಕ್ಷೇತ್ರದ ಮಾಜಿ ಹಾಗೂ ಹಾಲಿ ಶಾಸಕರು ಹಾಗೂ ಸಚಿವರನ್ನು ಆಹ್ವಾನಿಸಲಾಗುವುದು. ಸಾಂಕೇತಿಕವಾಗಿ 20 ರಂದು ಬಂದ್ ಕರೆ ನೀಡಲಾಗಿದೆ. ಈ ಸಮಸ್ಯೆಗೆ ಕಾರಣ ಕಂಡುಕೊಂಡು ಅದನ್ನು ಯಾವ ರೀತಿ ಪರಿಹರಿಸಬೇಕೆನ್ನುವ ಕುರಿತು ಚರ್ಚಿಸಿ ಶಾಶ್ವತ ಪರಿಹಾರಕ್ಕೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಶಾಶ್ವತ ಪರಿಹಾರಕ್ಕೆ ಅಗತ್ಯವಿರುವ ಕಾನೂನು ಹಾಗೂ ಇನ್ನಿತರ ನೆರವಿಗೆ ಸ್ಥಳೀಯ ನ್ಯಾಯವಾದಿಗಳು ಸಹಕರಿಸಲಿದ್ದಾರೆ. ಆದ್ದರಿಂದ ಅಥಣಿ ನಾಗರಿಕರು ಮತ್ತು ಎಲ್ಲ ಜನ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹೋರಾಟದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಈ ವೇಳೆ ಖಾಸಗಿ ವಾಹಿನಿಯ ವರದಿಗಾರ ದೀಪಕ ಸಿಂಧೆ ಮಾತನಾಡಿ, ವೈಜ್ಞಾನಿಕವಾಗಿ ನದಿಗಳ ಜೋಡಣೆ ಆಗಬೇಕು ಇಲ್ಲವೇ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಮೂಲಕ ವಿಜಯಪುರ, ಬಾಗಲಕೋಟೆ, ಬೆಳಗಾವಿ 800ಕ್ಕೂ ಹೆಚ್ಚು ಗ್ರಾಮಗಳ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಇದಕ್ಕೆ ಜನಪ್ರತಿನಿಧಿಗಳು ಮತ್ತು ಜಲ ಸಂಪನ್ಮೂಲ ಸಚಿವರ ಇಚ್ಛಾಶಕ್ತಿ ಅವಶ್ಯ ಎಂದರು. ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಎ.ವನಜೋಳಿ, ರಮೇಶ ಸಿಂದಗಿ, ಎಸ್.ಎಸ್. ಪಾಟೀಲ. ಶಬ್ಬೀರ ಸಾತಬಚ್ಚೆ, ಪರುಶರಾಮ ನಂದೇಶ್ವರ, ರಮೇಶ ಬಾದವಾಡಗಿ, ವಿಜಯಕುಮಾರ ಅಡಹಳ್ಳಿ, ವಿನಾಯಕ.ಬಿ.ಜೆ, ಪಂಡಿತ ನೂಲಿ, ಪ್ರಶಾಂತ ತೋಡ್ಕರ, ಬಸವರಾಜ ಕಾಂಬಳೆ, ಮಹಾಂತೇಶ ಬಾಡಗಿ, ಜಗನಾಥ ಬಾಮನೆ, ಚಿದಾನಂದ ಸೇಗುಣಸಿ, ಅನಿಲ ನಾಯಿಕ ಅನೀಲ ಸೌದಾಗರ, ಸುನಿಲ ನಾಯಿಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.