ದಾವಣಗೆರೆ: ಜಿಲ್ಲೆಯ ವಸತಿ ನಿಲಯ ಕಾರ್ಮಿಕರಿಗೆ ಬಾಕಿ ಇರುವ ಹಲವಾರು ತಿಂಗಳ ವೇತನ ಪಾವತಿ ಮತ್ತು ಭವಿಷ್ಯನಿಧಿ ಸೌಲಭ್ಯಕ್ಕೆ ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ (ಎಐಯುಟಿಯುಸಿ) ನೇತೃತ್ವದಲ್ಲಿ ಹಾಸ್ಟೆಲ್ ಕಾರ್ಮಿಕರು ಸೋಮವಾರ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಬರುವ ವಸತಿ ನಿಲಯ, ವಸತಿ ಶಾಲೆಯಲ್ಲಿ ಸರ್ಕಾರದಿಂದ ಮಂಜೂರಾಗಿಯೂ ಖಾಲಿ ಇರುವ ಅಡುಗೆಯವರು, ಸಹಾಯಕರು, ಕಾವಲುಗಾರರಾಗಿ ಕೆಲಸ ಮಾಡುತ್ತಿರುವ ಜಿಲ್ಲೆಯ 800 ಜನರಿಗೆ ಕಳೆದ 8 ತಿಂಗಳನಿಂದ ವೇತನವನ್ನೇ ನೀಡಿಲ್ಲ.
ಸಮಾಜ ಕಲ್ಯಾಣ ಇಲಾಖೆಯಿಂದ ಗುತ್ತಿಗೆ ಪಡೆದವರ ಬಗ್ಗೆ ಕಾರ್ಮಿಕರಿಗೆ ಗೊತ್ತೇ ಇಲ್ಲ. ಅಧಿಕಾರಿಗಳು ಇಲ್ಲ ಸಲ್ಲದ ನೆಪ ಹೇಳುತ್ತಿದ್ದಾರೆ. ವೇತನ ಇಲ್ಲದೆ ನೌಕರರು ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಹಾಗಾಗಿ ಸಂಬಂಧಿತರು ಕೂಡಲೇ ವೇತನದ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗುತ್ತಿಗೆದಾರರು ಕನಿಷ್ಟ ವೇತನ ನೀಡುತ್ತಿಲ್ಲ. ಕಾರ್ಮಿಕ ಇಲಾಖೆಯವರು ಸಹ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾರ್ಮಿಕರ ಭವಿಷ್ಯನಿಧಿಯಲ್ಲೂ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. 2015-16 ಮತ್ತು 2016- 17ನೇ ಸಾಲಿನಲ್ಲಿ ಇಎಸ್‌ಐ, ಇಪಿಎಫ್ ಖಾತೆಗೆ ಹಣ ತುಂಬುವಲ್ಲಿ ಮೇಲ್ನೋಟಕ್ಕೆ ಅಕ್ರಮ ನಡೆದಂತೆ ಕಂಡು ಬರುತ್ತಿದೆ.
ಕಾರ್ಮಿಕರಿಗೆ ದೊರೆಯಲೇಬೇಕಾದ ಇಎಸ್‌ಐ, ಇಪಿಎಫ್ ಖಾತೆಗೆ ಸರಿಯಾಗಿ ಹಣ ಪಾವತಿಸುವ ಮೂಲಕ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು. ವೇತನ ಚೀಟಿ, ರಜಾ ಸೌಲಭ್ಯ ಇತರೆ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕೈದಾಳೆ, ಶಿವಾಜಿರಾವ್, ಸ್ವಾಮಿ ನಿಂಗಪ್ಪ, ಏಕಾಂತಪ್ಪ, ಮಂಗಳಮ್ಮ, ರೂಪಾ, ಸಿದ್ದಮ್ಮ, ನೂರ್, ಅರ್ಜುನ್, ಹಾಲೇಶ್, ಪ್ರಕಾಶ್, ಬಸವರಾಜ್, ಈಶ್ವರಪ್ಪ, ರವಿ ಇದ್ದರು.