Advertisement

“ಮೂಲಸೌಕರ್ಯ ಒದಗಿಸಿ ಇಲ್ಲವೇ ರಾಜೀನಾಮೆ ನೀಡಿ’

12:06 AM May 01, 2019 | Sriram |

ಕುಂಬಳೆ: ಭಾರತೀಯ ಜನತಾ ಪಾರ್ಟಿ ಪೈವಳಿಕೆ ಪಂಚಾಯತ್‌ ಸಮಿತಿ ವತಿಯಿಂದ ಪೈವಳಿಕೆ ಗ್ರಾ. ಪಂ.ನ ಎಲ್‌ಡಿಎಫ್‌, ಯುಡಿಎಫ್‌ ಆಡಳಿತ ವೈಫಲ್ಯ ದಿಂದಾಗಿ ಕುಡಿಯುವ ನೀರಿನ ಅಸಮರ್ಪಕ ಸರಬರಾಜಿಗೆ ವಿರುದ್ಧವಾಗಿ ಪಂಚಾಯತ್‌ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು.

Advertisement

ಧರಣಿಯನ್ನು ಭಾರತೀಯ ಜನತಾ ಯುವಮೋರ್ಚಾ ರಾಜ್ಯ ನೇತಾರ ಪಿ.ಆರ್‌. ಸುನಿಲ್‌ ಉದ್ಘಾಟಿಸಿ ಜನರ ಮೂಲ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರಿಗಾಗಿ ಪರದಾಡುವಂತ ಸ್ಥಿತಿಯನ್ನು ಆಡಳಿತ ತಂದಿದೆ. ಮೂಲಸೌಕರ್ಯ ಒದಗಿಸದ ಆಡಳಿತ ರಾಜೀನಾಮೆ ನೀಡಬೇಕು ಎಂದರು.

ಸರಕಾರ ಮತ್ತು ಜಿಲ್ಲಾಡಳಿತದಿಂದ ದೊರಕಿದ ಬರಪರಿಹಾರ ನಿಧಿಯಿಂದ ಹಾಗೂ ಪಂಚಾಯತ್‌ ಸ್ವಂತ ನಿಧಿನಿಂದ ಸಕಾಲದಲ್ಲಿ ವಿತರಿಸಬೇಕಾದ ಶುದ್ಧ ಕುಡಿಯುವ ನೀರನ್ನು ವಿತರಣೆ ಮಾಡದೆ ಜನರನ್ನು ಸಂಕಷ್ಟಕ್ಕೊಳಪಡಿಸಿದ ಎಡಬಲ ರಂಗಗಳ ಅಪಮೈತ್ರಿಯ ಆಡಳಿತ ರಾಜೀನಾಮೆ ನೀಡಬೇಕು. ಪೈವಳಿಕೆ ಪಂಚಾಯತ್‌ನ ನಾಗರಿಕರ ಆಶೋತ್ತರಕ್ಕೆ ಅನುಗುಣವಾಗಿ ಆಡಳಿತ ನಡೆಸದಿದ್ದಲ್ಲಿ ಇವರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿರುವರೆಂದು ಎಚ್ಚರಿಸಿದರು.

ಗ್ರಾಮ ಸ್ವರಾಜ್ಯಕಲ್ಪನೆಯೊಂದಿಗೆ ಗ್ರಾಮ ಪಂಚಾಯತ್‌ನ ಆಡಳಿತ ನಡೆಸಲು ಅಸಾಧ್ಯವಾಗುವುದಾದಲ್ಲಿ ಅಧ್ಯಕ್ಷರು ರಾಜೀ ನಾಮೆಕೊಟ್ಟು ನಮ್ಮೊಂದಿಗೆ ಹೋರಾಟಕ್ಕೆ ಕೈ ಜೋಡಿಸಲು ಕರೆಕೊಟ್ಟರು. ಹಿಂದಿನ ಬಿಜೆಪಿ ಆಡಳಿತ ಕಾಲದಲ್ಲಿ ನಿರ್ವಹಿಸಿದ ಜಲನಿಧಿ ಯೋಜನೆಯನ್ನು ಇಂದಿನ ಎಡಬಲ ಆಡಳಿತ ಮುಂದುವರಿಸದೆ ಜನರಿಗೆ ಕುಡಿಯುವ ನೀರಿಗೆ ತೊಂದರೆ ಮಾಡಿದೆ ಎಂದು ಆರೋಪಿಸಿದರು.ಕಳೆದ ಬಿಜೆಪಿ ಆಡಳಿತದಲ್ಲಿ ಜಲನಿಧಿ ಯೋಜನೆಯ ಹೆಚ್ಚಿನ ಘಟಕಗಳು ಕಾರ್ಯಪ್ರವರ್ತನಗೊಂಡು ಪಂಚಾಯತ್‌ ವ್ಯಾಪ್ತಿಯ ಜನರ ಕುಡಿಯುವ ನೀರಿನ ಆಶೋತ್ತರವನ್ನು ಈಡೇರಿಸಿದೆ. ಆ ಬಳಿಕ ಬಂದ ಸಿಪಿಎಂ ಆಡಳಿತ ಬಿ.ಜೆ.ಪಿ. ಆಡಳಿತಕ್ಕೆ ಉತ್ತಮ ಹೆಸರು ಬರಬಹುದೆಂಬ ಭಯದಿಂದ ಜಲನಿಧಿಪದ್ಧತಿಯನ್ನು ಸ್ಥಗಿತಗೊಳಿಸಿ ಜನತೆಗೆ‌ ದ್ರೋಹಬಗೆದಿರುವುದಾಗಿ ಆರೋಪಿಸಿದರು.

ಬಿ.ಜೆ.ಪಿ. ಪಂಚಾಯತ್‌ ಸಮಿತಿ ಅದ್ಯಕ್ಷ ಸದಾಶಿವ ಚೇರಾಲ್‌ ಅಧ್ಯಕ್ಷತೆ ವಹಿಸಿದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಕ್ಷದ ಪೈವಳಿಕೆ ಪಂಚಾಯತ್‌ ಪ್ರಭಾರಿ ಎಂ. ಹರಿಶ್ಚಂದ್ರ ಮಂಜೇಶ್ವರ ಪಕ್ಷದ ನಾಯಕರಾದ ಕೆ. ಜಯಲಕ್ಷ್ಮೀ ಭಟ್‌ ಎ.ಕೆ. ಕಯ್ನಾರ್‌, ಪ್ರಸಾದ್‌ ರೈ ಕಯ್ನಾರ್‌, ಕಿಶೋರ್‌ ಕುಮಾರ್‌ ನಾಯಕ್‌, ಗಣೇಶ್‌ ಕುಲಾಲ್‌, ತಾರಾ ವಿ. ಶೆಟ್ಟಿ ರಾಜೀವಿ ಉಪಸ್ಥಿತರಿದ್ದರು. ಪಂಚಾಯತ್‌ ಸಮಿತಿ ಕಾರ್ಯದರ್ಶಿ ಎಸ್‌. ಸುಬ್ರಹ್ಮಣ್ಯ ಭಟ್‌ ಸ್ವಾಗತಿಸಿದರು. ಯುವಮೋರ್ಚಾ ನಾಯಕ ಸಂತೋಷ ಸಜಂಕಿಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next