Advertisement

ಬಡಗನ್ನೂರು ಶಾಲೆಗೆ ಹೊಸ ಕೊಠಡಿ, ಟಿಜಿಟಿ ಶಿಕ್ಷಕರನ್ನು ಒದಗಿಸಿ

12:59 PM May 30, 2018 | Team Udayavani |

ಬಡಗನ್ನೂರು : ಈ ಭಾಗದಲ್ಲಿ ಅತಿ ಹೆಚ್ಚು ಮಕ್ಕಳು ಓದುವ ಸರಕಾರಿ ಶಾಲೆ ಎಂದರೆ, ಬಡಗನ್ನೂರಿನ ದ.ಕ.ಜಿ.ಪಂ. ಉ.ಹಿ.ಪ್ರಾ. ಶಾಲೆ. ಈ ಬಾರಿಯೂ ಈ ಶಾಲೆಯಲ್ಲಿ 106 ವಿದ್ಯಾರ್ಥಿಗಳಿದ್ದಾರೆ.

Advertisement

ಇಲ್ಲಿ ಮೂಲಸೌಕರ್ಯಗಳಿಗೆ ಕೊರತೆ ಇಲ್ಲ. ಈ ಶಾಲೆ 1948ರಲ್ಲಿ ಒಂದೇ ಕೊಠಡಿಯಿಂದ ಆರಂಭವಾಗಿದೆ. ಇದೇ ಕೋಣೆಯಲ್ಲಿ ಈಗಲೂ ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಶಾಲೆಯ ವಿಶೇಷ ದಿನಗಳಲ್ಲಿ ಸಭೆ-ಸಮಾರಂಭ ಆಯೋಜಿಸುತ್ತಾರೆ. ಈ ಕಟ್ಟಡ ಮೇಲ್ಛಾವಣಿ ಮುರಿದು ನಿಂತಿದ್ದು, ಗೋಡೆಗಳು ಒಡೆದಿವೆ. ಎರಡು ವರ್ಷಗಳಿಂದ ಮರದ ಕಂಬವೊಂದರ ಆಧಾರ ನೀಡಿ, ಛಾವಣಿಯನ್ನು ನಿಲ್ಲಿಸಲಾಗಿದೆ. ಇದರ ಚಿತ್ರಗಳೊಂದಿಗೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕಳೆದ ಮಳೆಗಾಲದ ಸಂದರ್ಭದಲ್ಲಿ ಬೇರೆ ಕೊಠಡಿಗೆ ಮಕ್ಕಳನ್ನು ವರ್ಗಾಯಿಸಿಕೊಂಡು ತರಗತಿ ಮುಂದುವರಿಸಲಾಗಿತ್ತು. ಮುರಿದು ಬೀಳುವ ಮುನ್ನ ಕೊಠಡಿಯನ್ನು ತ್ವರಿತವಾಗಿ ದುರಸ್ತಿ ಮಾಡಬೇಕು ಇಲ್ಲವೇ ಹೊಸ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಟಿ.ಜಿ.ಟಿ. ಶಿಕ್ಷಕರು ಬೇಕು ಇಲ್ಲಿ ಎಂಟನೇ ತರಗತಿ ವರೆಗೆ ಇರುವುದರಿಂದ ಟಿ.ಜಿ.ಟಿ. ಶಿಕ್ಷಕರ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದು ಮುಖ್ಯವೆನಿಸಿದೆ. ಒಂದು ವರ್ಷದಿಂದ ಈ ಹುದ್ದೆ ಖಾಲಿ ಇದ್ದು, ತತ್‌ಕ್ಷಣ ಭರ್ತಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಸ್ಪಂದಿಸಿದರೆ ಉತ್ತಮ
ಕಳೆದ ಸಾಲಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಮಕ್ಕಳನ್ನು ಬೇರೆ ಕೊಠಡಿಗೆ ವರ್ಗಾಯಿಸಿಕೊಂಡು ತರಗತಿಗಳನ್ನು ಮುಂದುವರಿಸಲಾಗಿದೆ. ಈ ಭಾರಿ ಮಳೆಗೆ ಕೊಠಡಿಯ ಛಾವಣಿ ಮುರಿದು ಬೀಳುವ ಅಪಾಯವಿದೆ. ಗೋಡೆಗಳೂ ಶಿಥಿಲವಾಗಿವೆ. ಇಲಾಖೆ ಹಾಗೂ ಜನಪ್ರತಿನಿಧಿಗಳು ತತ್‌ ಕ್ಷಣವೇ ಸ್ಪಂದಿಸಿದರೆ ಉತ್ತಮ.
– ತ್ಯಾಂಪಣ್ಣ ಸಿ.ಎಚ್‌.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

ಮನವಿ ಮಾಡಿದ್ದೇವೆ
ಎಂಟನೇ ತರಗತಿಯ ವರೆಗೆ ಇರುವುದರಿಂದ ಟಿ.ಜಿ.ಟಿ. ಶಿಕ್ಷಕರ ಅಗತ್ಯ ಇದೆ. ಈ ಬಗ್ಗೆ ಇಲಾಖೆಗೆ ಮನವಿ ಮಾಡಲಾಗಿದೆ. ಟಿ.ಜಿ.ಟಿ. ಶಿಕ್ಷಕರನ್ನು ಒದಗಿಸುವ ಭರವಸೆ ನೀಡಿದ್ದಾರೆ. ಅದಷ್ಟು ಬೇಗ ನೇಮಕಾತಿಯಾದರೆ ಮಕ್ಕಳ ಕಲಿಕೆಗೆ ಸಹಕಾರಿ. 70 ವರ್ಷ ಹಳೆಯ ಕೊಠಡಿಯ ಛಾವಣಿ ಹಾಗೂ ಗೋಡೆ ಶಿಥಿಲವಾಗಿದ್ದು, ಮಳೆಗಾಲದಲ್ಲಿ ಇಲ್ಲಿ ತರಗತಿ ನಡೆಸುವುದು ಕ್ಷೇಮಕರವಲ್ಲ. ಇಲಾಖೆಗೆ, ಶಾಸಕರಿಗೆ ಮನವಿ ನೀಡಿಯೂ ಪ್ರಯೋಜನವಾಗಿಲ್ಲ. ಈ ಎರಡು ಸಮಸ್ಯೆಗಳಿಗೆ ಇಲಾಖೆ ಕೂಡಲೇ ಸ್ಪಂದಿಸಬೇಕು. 
– ಹರಿಣಾಕ್ಷಿ ಎ.,
ಮುಖ್ಯ ಶಿಕ್ಷಕಿ

Advertisement

ದಿನೇಶ್‌ ಬಡಗನ್ನೂರು

Advertisement

Udayavani is now on Telegram. Click here to join our channel and stay updated with the latest news.

Next