ಕಡೂರು: ಕೋಳಿ ಸಾಕಾಣಿಕೆದಾರರಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕಾದ ಅವಶ್ಯಕತೆಯಿದೆ ಎಂದು ಜಿ.ಪಂ ಸದಸ್ಯ ಕೆ.ಆರ್. ಮಹೇಶ್ ಒಡೆಯರ್ ಅಭಿಪ್ರಾಯಪಟ್ಟರು.
ಪಟ್ಟಣದ ಆರೆಂಜ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಕಾಳಿ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ನಾಟಿಕೋಳಿ ಸಾಕಾಣಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಸು, ಕೋಳಿ, ಕುರಿ ಮುಂತಾದ ಪ್ರಾಣಿಗಳ ಸಾಕಾಣಿಕೆಗೆ ಸರಕಾರ ಹಲವು ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಯಂ ಸೇವಾ ಸಂಸ್ಥೆಗಳು ಕೂಡ ರೈತರಲ್ಲಿ ಉತ್ಸಾಹ ತುಂಬುತ್ತಿವೆ. ಆದರೆ ಸೂಕ್ತ ಮಾರುಕಟ್ಟೆ ದೊರಕದೆ ಸಾಕಾಣಿಕೆದಾರರು ಅತಂತ್ರ ಸ್ಥಿತಿಗೆ ತಲುಪುತ್ತಾರೆ ಎಂದು ವಿಷಾಧಿಸಿದರು.
ಸಾಕಾಣಿಕೆದಾರರ ಶೋಷಣೆ ನಿರಂತರವಾಗಿದೆ. ಕೆಲವು ಕಂಪನಿ ಅಥವಾ ಸ್ವಯಂ ಸೇವಾ ಸಂಸ್ಥೆಗಳು ಇದಕ್ಕೆ ಹೊರತಾಗಿವೆ. ತಾಂತ್ರಿಕ ಮಾಹಿತಿ ನೀಡುವ ಜತೆಗೆ ಸಾಕಾಣಿಕೆದಾರರಿಗೆ ಆರ್ಥಿಕ ಚೈತನ್ಯ ತುಂಬಿದರೆ ಕೋಳಿ ಸಾಕಾಣಿಕೆ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿಯಾಗಲಿದೆ. ಈಗಾಗಲೇ ಇದು ಉದ್ಯಮವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದರು.
ತಾಪಂ ಉಪಾಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ ಮಾತನಾಡಿ, ಕೋಳಿ ಸಾಕಾಣಿಕೆದಾರರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಇಂತಹ ಯೋಜನೆಗಳು ಅವಶ್ಯಕವಾಗಿದೆ. ಆದರೆ ಅವರಿಗೆ ಮೋಸವಾಗುವುದು ಬೇಡ. ರೈತರು ಮುಗªರಾಗಿದ್ದು ಅವರ ಮುಗªತೆಯನ್ನು ಬಂಡವಾಳ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು. ಆರೆಂಜ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ವಿ. ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾ.ಪಂ ಅಧ್ಯಕ್ಷೆ ಭಾರತಿ ಪ್ರಹ್ಲಾದ್, ಬೆಂಗಳೂರಿನ ಐಶ್ವರ್ಯ ಕೋಳಿ ಸಾಕಾಣಿಕೆಯ ಸಂಸ್ಥೆಯ ರಮೇಶ್, ಮೋಹನ್ ಕೋಳಿ ಸಾಕಾಣಿಕೆ ಹಾಗೂ ಫಿಡ್ಸ್ ಸಂಸ್ಥೆಯ ಶೈಲಾ ಮುಂತಾದವರು ಉಪಸ್ಥಿತರಿದ್ದರು.