ಗದಗ: ಪರಿಶಿಷ್ಟ ಸಮುದಾಯದವರ ಮಾದರಿಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೂ ಸರಕಾರದಿಂದ ಶೇ. 50ರಷ್ಟು ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಅದರೊಂದಿಗೆ ಗೌರವಯುತ ಜೀವನ ನಿರ್ವಹಣೆಗಾಗಿ ಸರಕಾರದಿಂದ ಸೂರು ಕಲ್ಪಿಸಬೇಕು ಎಂಬ ಲಿಂಗತ್ವ ಅಲ್ಪಸಂಖ್ಯಾತರ ಬೇಡಿಕೆಗಳ ಈಡೇರಿಕೆಗೆ ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ನ್ಯಾಯ ಕೊಡಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಒಂದೆಡೆ ಭಿಕ್ಷಾಟನೆಗೂ ಅವಕಾಶವಿಲ್ಲದಂತಾಗಿತ್ತು. ಮತ್ತೂಂದೆಡೆ ಮನೆ ಬಾಡಿಗೆ ಕಟ್ಟಲಾಗದೇ ಮಾಲೀಕರ ಕಿರುಕುಳದಿಂದ ಬೀದಿಗೆ ಬರುವಂತಾಯಿತು. ಸ್ವಯಂ ಉದ್ಯೋಗ ಕೈಗೊಳ್ಳಲು ಸರಕಾರದಿಂದ ಹೆಚ್ಚಿನ ನೆರವು ದೊರೆತರೆ ಅವರು ಕೂಡ ಎಲ್ಲರಂತೆ ಸಹಜ ಜೀವನ ನಡೆಸಲು ಹಾಗೂ ಸಾಮಾಜಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಲಾಕ್‌ಡೌನ್ ಸಮಸ್ಯೆಯಿಂದಾಗಿ ವಿಧವೆಯರು,ವೃದ್ಧರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆಮಾಸಾಶನ ಬಿಡುಗಡೆ ವಿಳಂಬವಾಗಿದೆ. ನಾನಾಕಾರಣಗಳಿಂದಾಗಿ ವಸತಿ, ಸ್ವಯಂ ಉದ್ಯೋಗ ಯೋಜನೆಗಳು ಕುಂಠಿತಗೊಂಡಿದೆ. ದೇವದಾಸಿಮಹಿಳೆಯರ ಮಕ್ಕಳಿಗೆ ಶಿಕ್ಷಣಕ್ಕೆ ಎದುರಾಗಿರುವಕಾನೂನಾತ್ಮಕ ತೊಡಕುಗಳ ನಿವಾರಣೆಗೆ ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಮುಂದಿನ 60ರಿಂದ 90 ದಿನಗಳಲ್ಲಿ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಗಡುವು ನೀಡಿದ್ದಾಗಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರ ಉಪಸ್ಥಿತರಿದ್ದರು.
ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದರು. ದೌರ್ಜನ್ಯಕ್ಕೊಳಗಾದ ಮಹಿಳೆಯರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಕೈಗೊಳ್ಳದೇ, ದೌರ್ಜನ್ಯ ಎಸಗಿರುವ ವ್ಯಕ್ತಿಗೆ ಕಾನೂನಿನನ್ವಯ ಶಿಕ್ಷೆ ಕೊಡಿಸಲು ಮುಂದಾಗಬೇಕು. ಅದರಂತೆ ಲಾಕ್‌ಡೌನ್ ವೇಳೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಅನೇಕ ಮಹಿಳೆಯರಿಗೆ ರಾಜ್ಯ ಮಹಿಳಾ ಆಯೋಗ ನ್ಯಾಯ ಕೊಡಿಸಿದೆ. ಊಟ, ವಸತಿಗಾಗಿ ಪರದಾಡುತ್ತಿದ್ದವರಿಗೆ ಅಗತ್ಯಸೌಲಭ್ಯ ಕಲ್ಪಿಸಿದ್ದು, ಆಯೋಗ ಮಹಿಳೆಯರ ಧ್ವನಿಯಾಗಿದೆ.
– ಆರ್. ಪ್ರಮೀಳಾ ನಾಯ್ಡು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ