ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳ ರೈತರ ಬೆಳೆ ನಷ್ಟದ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮಾ ಕಂಪನಿಗಳಿಂದ ಶೇ.25 ಮಧ್ಯಂತರ ಪರಿಹಾರ ಕೊಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ರೈತರ 30 ಲಕ್ಷ ಎಕರೆ ಜಮೀನಿನಲ್ಲಿ ಬೆಳೆ ನಾಶವಾಗಿದೆ ಎಂದರು.
ರಾಜ್ಯ, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ನಿಯಮಗಳ ಪ್ರಕಾರ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಒಂದು ವಾರದಲ್ಲಿ ಬೆಳೆ ನಷ್ಟದ ಸಮೀಕ್ಷೆ ಮಾಡಿ ವಿಮಾ ಕಂಪನಿಗೆ ವರದಿ ನೀಡಬೇಕು. ವಿಮಾ ಕಂಪನಿ ಯಾವುದೇ ಕಾರಣ ಹೇಳದೇ ಹದಿನೈದು ದಿನದಲ್ಲಿ ವಿಮಾ ಪರಿಹಾರ ಮೊತ್ತದ ಶೇ.25ರಷ್ಟು ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಆಗಸ್ಟ್ 1 ರಿಂದ ಮಳೆ, ಪ್ರವಾಹ ಶುರುವಾಗಿದೆ. ಆದರೆ, ಇದುವರೆಗೆ ಬೆಳೆ ನಷ್ಟದ ಸಮೀಕ್ಷೆ ನಡೆಸಿಲ್ಲ. ರಾಜ್ಯ ಸರ್ಕಾರ ತಕ್ಷಣ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಿ, ಸಮೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದರು.
ಪರಿಹಾರ ಹೆಚ್ಚಳ ಮಾಡಿ: ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಬೇಕು. ಮನೆ ಕಳೆದುಕೊಂಡವರಿಗೆ ಬಾಡಿಗೆಯನ್ನು 5 ಸಾವಿರ ಬದಲು 10 ಸಾವಿರ ರೂ. ನೀಡಬೇಕು. ಪರಿಹಾರ ಕೇಂದ್ರದಲ್ಲಿರುವವರಿಗೆ ಯಾವುದೇ ದಾಖಲೆ ಕೇಳದೇ ಮನೆ ಕಟ್ಟಿಕೊಳ್ಳಲು 5 ಲಕ್ಷದ ಬದಲು 10 ಲಕ್ಷ ರೂ. ನೀಡಬೇಕು ಎಂದು ಮನವಿ ಮಾಡಿದರು.