Advertisement

ಕಾಡಂಚಿನ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿ

09:30 PM Sep 18, 2019 | Team Udayavani |

ಹನೂರು: ದೊಡ್ಡಾಣೆ ಸೇರಿದಂತೆ ಕೊಕ್ಕಬರೆ, ತೋಕೆರೆ ಗ್ರಾಮಗಳಿಗೆ ರಸ್ತೆ ನಿರ್ಮಿಸಲಾಗಿದ್ದು ಅರಣ್ಯ ಇಲಾಖೆಯಿಂದ ಪ್ರತಿದಿನ 3 ಅವಧಿಯಲ್ಲಿ ವಾಹನ ಸೌಲಭ್ಯ ಕಲ್ಪಿಸಬೇಕು ಮತ್ತು ಪಡಿತರ ಸೇರಿದಂತೆ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಆಯಾ ಗ್ರಾಮಗಳಲ್ಲಿಯೇ ವಿತರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ಕಾಡಂಚಿನ ಗ್ರಾಮಗಳಾದ ಕೊಕ್ಕಬರೆ, ತೋಕೆರೆ ಮತ್ತು ದೊಡ್ಡಾಣೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

Advertisement

ದಿನಕ್ಕೆ ಮೂರು ಬಾರಿ ವಾಹನದ ವ್ಯವಸ್ಥೆ: ನಂತರ ಮಾತನಾಡಿದ ಅವರು, ದೊಡ್ಡಾಣೆ ಗ್ರಾಮಕ್ಕೆ ಇದುವರೆಗೂ ರಸ್ತೆ ಸಂಪರ್ಕ ಕಲ್ಪಿಸಿರಲಿಲ್ಲ. ಇದೀಗ ಅರಣ್ಯ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿಪಡಿಸಲಾಗಿದ್ದು ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆಯಲ್ಲಿ ದಿನಕ್ಕೆ 3 ಬಾರಿ ಅರಣ್ಯ ಇಲಾಖೆ ವಾಹನ ಸಂಚಾರ ನಡೆಸಲು ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರೂ ಕೂಡ ವಾಹನದ ಸಮಯವನ್ನು ಅರಿತು ತಮ್ಮ ದೈನಂದಿನ ವ್ಯವಹಾರಕ್ಕೆ ಇನ್ನಿತರ ಕಡೆಗಳಿಗೆ ತೆರಳಲು ಅನುಕೂಲತೆ ಪಡೆದುಕೊಳ್ಳಬೇಕು ಎಂದರು. ಇದೇ ವೇಳೆ ತೋಕೆರೆ ಗ್ರಾಮದ ಶಾಲೆ ಮತ್ತು ಅಂಗನವಾಡಿ ಪರಿಶೀಲನೆ ನಡೆಸಿ ಅಂಗನವಾಡಿ ಕೇಂದ್ರವನ್ನು ಬೇರೆ ಕಟ್ಟಡಕ್ಕೆ ವರ್ಗಾಯಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಗ್ರಾಮಗಳಲ್ಲಿಯೇ ಪಡಿತರ ವಿತರಿಸಿ: ಕಾಡಂಚಿನ ಗ್ರಾಮಗಳಿಗೆ ರಸ್ತೆ ಮತ್ತು ವಾಹನ ಸೌಕರ್ಯವಿಲ್ಲದ ಹಿನ್ನೆಲೆ ಸರ್ಕಾರದಿಂದ ನೀಡುವ ಪಡಿತರ, ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಪಡಿತರವನ್ನು ಪಡೆಯಲು ಕೊಕ್ಕಬರೆಗೆ 8 ಕಿ.ಮೀ ನಡೆದುಬಂದೇ ಪಡೆಯಬೇಕಾದ ಪರಿಸ್ಥಿತಿಯಿತ್ತು. ಇದೀಗ ರಸ್ತೆ ನಿರ್ಮಾಣ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಆಯಾ ಗ್ರಾಮಗಳಲ್ಲಿಯೇ ಪಡಿತರ ವಿತರಿಸಲು ಕ್ರಮವಹಿಸಬೇಕು. ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಪಡಿತರವನ್ನು ಅರಣ್ಯ ಇಲಾಖೆ ವಾಹನಗಳಲ್ಲಿ ಸಾಗಾಟ ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲು ಸೂಚನೆ ನೀಡಿದರು.

ವಾರಕ್ಕೊಮ್ಮೆ ತಪಾಸಣೆಗೆ ಕ್ರಮವಹಿಸಲಾಗುವುದು: ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಾರಕ್ಕೊಮ್ಮೆ ವೈದ್ಯರು, ಶುಶ್ರೂಷಕರು ಗ್ರಾಮಗಳಿಗೆ ಆಗಮಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುವುದು ಮತ್ತು ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಗತ್ಯ ಔಷಧೋಪಚಾರ ಮತ್ತು ಮಾತ್ರೆಗಳನ್ನು ನೀಡಲು ಕ್ರಮವಹಿಸಲಾಗುವುದು ಮತ್ತು ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುವುದು ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರ ಸಂತಸ: ಜಿಟಿ-ಜಿಟಿ ಮಳೆಯ ನಡುವೆಯೂ ಕಾಡಂಚಿನ ಗ್ರಾಮಗಳ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಗ್ರಾಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ತಂಡದ ಬಗ್ಗೆ ಸಾರ್ವಜನಿಕರು ಮೆಚ್ಚುಗೆಯ ಮಾತುಗಳನ್ನಾಡಿ ಪ್ರಶಂಸೆ ವ್ಯಕ್ತಪಡಿಸಿದರು. ಕಳೆದ ಬಾರಿ ಗ್ರಾಮಕ್ಕೆ ಬಂದಿದ್ದಾಗ ರಸ್ತೆ ನಿರ್ಮಾಣ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದೀರಿ. ಇದೀಗ ನುಡಿದಂತೆ ನಡೆದಿದ್ದು ಉತ್ತಮ ರಸ್ತೆ ನಿರ್ಮಾಣ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಅಗತ್ಯ ಸವಲತ್ತುಗಳನ್ನು ಕಲ್ಪಿಸಿ ಎಂದು ಮನವಿ ಮಾಡಿದರು.

Advertisement

ಕಾಡುಪ್ರಾಣಿಗಳ ಹಾವಳಿ ತಡೆಗೆ ಕ್ರಮವಹಿಸಿ: ಇದೇ ವೇಳೆ ಗ್ರಾಮಸ್ಥರು ಮಾತನಾಡಿ, ಜಮೀನುಗಳಿಗೆ ಕಾಡಾನೆಗಳು ಮತ್ತು ಕಾಡುಹಂದಿಗಳು ದಾಳಿ ನಡೆಸುತ್ತಿವೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಎಫ್ಒ ಏಡುಕೊಂಡಲು ವನ್ಯಜೀವಿಗಳ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಕಾಡು ಪ್ರಾಣಿಗಳಿಂದ ಸಂಭವಿಸಿರುವ ಬೆಳೆಹಾನಿ ಬಗ್ಗೆ ಅಗತ್ಯ ಮಾಹಿತಿ ನೀಡಿ ಅರ್ಜಿ ಸಲ್ಲಿಸಿದಲ್ಲಿ ಇಲಾಖೆ ವತಿಯಿಂದ ಸೂಕ್ತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಹಶೀಲ್ದಾರ್‌ ನಾಗರಾಜು, ಎಸಿಎಫ್ ಆಶೀಶ್‌ ರೆಡ್ಡಿ, ಆರ್‌ಎಫ್ಒಗಳಾದ ಅರುಣ್‌ ಕುಮಾರ್‌, ರಾಜೇಶ್‌ ಗವಾಲ್‌, ಪಿಡಿಒ ರಾಜೇಶ್‌, ಗ್ರಾಮ ಲೆಕ್ಕಿಗ ವಿನೋದ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next