ಬೆಳಗಾವಿ: ಇಲ್ಲಿಯ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಮೂಲ ಸೌಕರ್ಯ ಒದಗಿಸಬೇಕು. ಕೊಠಡಿ ನಿರ್ಮಿಸಲು ಸ್ವಂತ ಜಾಗ ನೀಡಬೇಕು ಎಂದು ಆಗ್ರಹಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳು ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಂಡು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ 2009-10ರಲ್ಲಿ ಆರಂಭಗೊಂಡಿದೆ. ಸುಮಾರು 10 ವಷಗಳು ಕಳೆದರೂ ಇನ್ನೂ ಅನೇಕ ಸೌಲಭ್ಯಗಳಿಂದ ವಿಶ್ವವಿದ್ಯಾಲಯ ವಂಚಿತಗೊಂಡಿದೆ. ಇನ್ನೂವರೆಗೆ ಸ್ವಂತ ಕಟ್ಟಡ ಇಲ್ಲದೇ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪರದಾಡುವಂತಾಗಿದೆ. ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅಗತ್ಯ ಕೊಠಡಿಗಳು ಇಲ್ಲದೇ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು. ಕಲಿಕೆ ಪೂರಕವಾದ ಕೊಠಡಿಗಳಿಲ್ಲದೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಶೌಚಗೃಹ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ತೊಂದರೆಗಳನ್ನು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿ ಕಾರಿಗಳನ್ನು ಕೇಳಿದರೆ ಸ್ವಂತ ಜಾಗ ಇಲ್ಲದಿರುವುದು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೆಪ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 365ಕ್ಕಿಂತ ಹೆಚ್ಚು ಕಾಲೇಜುಗಳು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿವೆ. ಸದ್ಯ 19 ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಟ್ಟಡ ಕೊರತೆಯಿಂದ ಇಲ್ಲಿ ಹೆಚ್ಚಿನ ಕೋರ್ಸ್‌ಗಳನ್ನು ಅಭ್ಯಸಿಸುವ ಅವಕಾಶವೂ ಕೈತಪ್ಪುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಾದರಿ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಸರ್ಕಾರ ಸ್ವಂತ ಜಮೀನು ನೀಡಬೇಕು. ವಿದ್ಯಾರ್ಥಿಗಳ ಅನುಕೂಲ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ವಿವಿಗೆ ಮಾನ್ಯತೆ ನೀಡಿ ಸ್ವಂತ ಜಾಗದ ಅನುಮತಿ ಕೊಟ್ಟು ವಿವಿ ಅಭಿವೃದ್ಧಿಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವಿಶ್ವವಿದ್ಯಾಲಯಕ್ಕೆ ಬರಲು ಸರಿಯಾದ ಬಸ್ ಸೇವೆ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ 4ರಿಂದ ನಡೆದುಕೊಂಡು ಬರುವಂತಾಗಿದೆ. ಕೆಲವೇ ಕೆಲವು ಬಸ್ ಸಂಚಾರ ಇರುವುದರಿಂದ ಬೇರೆ ಸಮಯದಲ್ಲಿ ಬೆಳಗಾವಿಗೆ ಹೋಗಲು ಅನುಕೂಲ ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಮಾ. 11ರೊಳಗಾಗಿ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ಅನಿಲ ನಡುವಿನಕೇರಿ, ಕಾವೇರಿ ಕುಂತಕಲ, ಗೋಪಾಲ ದಳವಾಯಿ, ಆರತಿ ಜಿ., ಅಕ್ಷತಾ ಬಾಳಿಕಾಯಿ ಸೇರಿದಂತೆ ಇತರರು ಇದ್ದರು.