ವಿಜಯಪುರ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಬಾಧಿತರಿಗೆ ಪರಿಹಾರ ಕ್ರಮಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಮತ್ತು ವಿಜಯಪುರ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಡಿ.ರಂದೀಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶುಕ್ರವಾರ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಮಳೆಯಿಂದ ಆಸ್ತಿಪಾಸ್ತಿ ಹಾಗೂ ಜನ-ಜಾನುವಾರು ಹಾನಿ ಪ್ರಕರಣಗಳಿಗೆ ಕಾಲಮಿತಿಯಲ್ಲಿ ಪರಿಹಾರ ವಿತರಣೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಮಳೆಗಾಲ ಆಗಿರುವ ಕಾರಣ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು. ಮಳೆ ಮತ್ತು ಪ್ರವಾಹದಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಬೇಕು ಎಂದು ತಹಶೀಲ್ದಾರ್ ಗಳಿಗೆ ಸೂಚಿಸಿದರು.
ಜಿಲ್ಲೆಯ ಪರಿಸ್ಥಿತಿ ವಿವರಿಸಿದ ಜಿಲ್ಲಾಧಿಕಾರಿ ಡಾ| ವಿಜಯಮಹಾಂತೇಶ ದಾನಮ್ಮನವರ, ಜಿಲ್ಲೆಯಲ್ಲಿ ಸಿಡಿಲಿನಿಂದಾದ ಹಾನಿಯ 7 ಪ್ರಕರಣಗಳಿಗೆ ಈಗಾಗಲೇ 5 ಲಕ್ಷ ರೂ. ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಏಪ್ರಿಲ್ ನಿಂದ ಇಲ್ಲಿವರೆಗೆ ಒಟ್ಟು 82 ಜಾನುವಾರು ಹಾನಿ ಪ್ರಕರಣಗಳಿಗೆ ಪರಿಹಾರ ಕಲ್ಪಿಸಲು ಮತ್ತು ಒಟ್ಟು 57 ಮನೆಹಾನಿ ಪ್ರಕರಣಗಳಲ್ಲಿ 52 ಪ್ರಕರಣಗಳಿಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
279 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿ ಪೈಕಿ ಇದುವರೆಗೆ 32.82 ಲಕ್ಷ ರೂ. ನಷ್ಟ ಪರಿಹಾರ ಕಲ್ಪಿಸಲಾಗಿದೆ. ತಿಕೋಟಾ, ಬಬಲೇಶ್ವರ, ಚಡಚಣ, ಕೋಲಾರ ಮತ್ತು ನಿಡಗುಂದಿ ಸೇರಿದಂತೆ ವಿವಿಧೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಇತ್ತೀಚೆಗೆ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿ, ಮಳೆ ಹಿನ್ನೆಲೆಯಲ್ಲಿ ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸ್ತಕ ವರ್ಷವೂ 17 ಸಾವಿರ ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ. ಈ ಬಾರಿ ಸೂರ್ಯಕಾಂತಿ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಈಗಾಗಲೇ 25,399 ಮೆಟ್ರಿಕ್ ಟನ್ ಗೊಬ್ಬರ ಸಂಗ್ರಹ ಮಾಡಲಾಗಿದೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ, ಸಹಾಯಕ ಆಯುಕ್ತರಾದ ಬಲರಾಮ ಲಮಾಣಿ, ರಾಮಚಂದ್ರ ಗಡಾದೆ ಸೇರಿದಂತೆ ಇತರರು ಇದ್ದರು.