ಮುಧೋಳ: ಯಪ್ಪಾ ಸಾಹೇಬ್ರ. ಹೊಳಿ ನೀರ್ ಬಂದು ಮನಿ ಬಿದ್ದಾವು. ಮೂರು ತಿಂಗ್ಳ ಆಯಿತು. ಬಿದ್ದ ಮನಿ ಕಟ್ಟಾಕ್ ಆಗಿಲ್ಲ. ನಾವು ಬಡೂರು. ಜಲ್ದ ನಮಗ್ ಮನಿ ಕಟ್ಟಿಕೊಡ್ರಿ…
ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ವಸತಿ ಸಚಿವ ವಿ. ಸೋಮಣ್ಣ ಅವರೊಂದಿಗೆ ಪ್ರವಾಹದಿಂದ ಬಿದ್ದ ಮನೆಗಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ದಲಿತ ಕೇರಿಯ ಮಹಿಳೆಯರಿಬ್ಬರು ಮನವಿ ಮಾಡಿದರು.
ಗ್ರಾಮದ ದಲಿತ ಕಾಲೋನಿಯಲ್ಲಿ ಮನೆಗಳ ಪರಿಸ್ಥಿತಿ ಅವಲೋಕಿಸಲು ತೆರಳಿದ ಕಾರಜೋಳ ಅವರಿಗೆ ಎದುರಾದ ಮಹಿಳೆ ಪ್ರೇಮವ್ವ ಮ್ಯಾಗೇರಿ ಹಾಗೂ ಸುಶೀಲವ್ವ ಮ್ಯಾಗೇರಿ ಕಣ್ಣಾಲಿಗೆಯಲ್ಲಿ ನೀರು ತೆಗೆದು, ನಮಗ ಮನಿ ಕಟ್ಟಿಸಿಕೊಡ್ರಿ ಸಾಹೇಬ್ರ ಎಂದು ಹೇಳಿಕೊಂಡರು. ಇದೇ ವೇಳೆ ಕಾರಜೋಳರ ಕಾಲಿಗೆ ಬಿದ್ದು, ನಾವು ಬಡವರಿದ್ದೇವೆ. ಬಿದ್ದ ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ. ಅದೇ ಮನೆಯಲ್ಲಿ ವಾಸವಾಗಿದ್ದೇವೆ. ಮಳೆ-ಗಾಳಿಗೆ ಬಿದ್ದ ಮನೆಯಲ್ಲಿ ವಾಸಿಸುವುದು ಕಷ್ಟವಾಗಿದೆ. ಸರ್ಕಾರದಿಂದ ಮನೆ ಕಟ್ಟಿಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ, ಇನ್ನೂ ಮನೆ ಕಟ್ಟಿಕೊಟ್ಟಿಲ್ಲ. ಬೇಗ ಮನೆ ಕೊಡಿ ಎಂದು ಕೇಳಿಕೊಂಡರು.
ಪಿಡಿಒಗಳಲ್ಲ- ರಾಕ್ಷಸರು: ಗುಲಗಾಲಜಂಬಗಿ ಗ್ರಾಮದಲ್ಲಿ ಪರಿಸ್ಥಿತಿ ಅವಲೋಕಿಸಿ ರೂಗಿ ಗ್ರಾಮಕ್ಕೆ ಆಗಮಿಸುವ ವೇಳೆ ಗ್ರಾಮದ ಹೊರಭಾಗದಲ್ಲಿನ ಗಲೀಜ ಕಂಡು ಕೆಂಡಾಮಂಡಲರಾದ ವಿ.ಸೋಮಣ್ಣ, ಕೂಡಲೇ ಅದನ್ನು ಸ್ವತ್ಛಗೊಳಿಸುವಂತೆ ಜಿಪಂ ಸಿಇಒ ಮಾನಕರ ಅವರಿಗೆ ಸೂಚಿಸಿದರು. ಈ ವೇಳೆ ಸಿಇಒ ಮಾನಕರ ನಾಳೆನೇ ಪಿಡಿಒ ಅವರಿಗೆ ಹೇಳುವೆ ಎಂದು ತಿಳಿಸಿದಾಗ ಅವರು ಪಿಡಿಒಗಳಲ್ಲ ರಾಕ್ಷಸರು ಎಂದು ಕೆಂಡಕಾರಿದರು.
ಮಕ್ಕಳನ್ನು ಬಿಸಿಲಲ್ಲಿ ಕಾಯಿಸಬೇಡಿ: ನಮ್ಮನ್ನು ಸ್ವಾಗತಿಸುವ ಉದ್ದೇಶಕ್ಕಾಗಿ ದೇವರ ಸ್ವರೂಪಿಯಾಗಿರುವ ಮಕ್ಕಳನ್ನು ಬಿಸಿಲಲ್ಲಿ ಕಾಯಿಸಬೇಡಿ ಎಂದು ಶಾಲೆ ಸಿಬ್ಬಂದಿಗೆ ಸಚಿವ ವಿ.ಸೋಮಣ್ಣ ಕಿವಿಮಾತು ಹೇಳಿದರು. ತಾಲೂಕಿನ ರೂಗಿ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತರ ಕುಂದು ಕೊರತೆ ವಿಚಾರಿಸಲು ತೆರಳಿ ದಾಗ ಗ್ರಾಮದ ಸೋಮೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಸಚಿವರ ಸ್ವಾಗತಕ್ಕೆ ಕಾದು ನಿಂತಿದ್ದರು. ಈ ವೇಳೆ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಬಳಿಕ ಶಾಲೆಯ ಕೊಠಡಿ ಶಿಥಿಲಗೊಂಡಿರುವುದನ್ನು ಪರಿಶೀಲಿಸಿದ ಸಚಿವರು ಶಾಲೆಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಶಾಲೆ ಮಕ್ಕಳೊಂದಿಗೆ ಕುಶಲೋಪರಿ ವಿಚಾರಿಸಿ ಚನ್ನಾಗಿ ಓದಿ ಕಾರಜೋಳರಂತೆ ಬೆಳೆಯಿರಿ ಎಂದು ಸಲಹೆ ನೀಡಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ ಗ್ರಾಮದಲ್ಲಿ ಕುಸಿತಗೊಂಡ ಮನೆಗಳನ್ನು ವೀಕ್ಷಿಸಿದರು. ಗ್ರಾಮದ ಮಹಾಂತೇಶ ರಾಮತೀರ್ಥ ಹಾಗೂ ಶಿವಪ್ಪ ಅವರ ಮನೆಗೆ ತೆರಳಿದ ಸಚಿವರು ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ. ಕೂಡಲೆ ಮನೆಯ ಕಾಮಗಾರಿಯನ್ನು ಆರಂಭಿಸಿ ಎಂದು ಹೇಳಿದರು. ಬಳಿಕ ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರಿಗೆ ಶಿಥಿಲಗೊಂಡಿರುವ ಮನೆಗಳಿಗೆ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
-ಗೋವಿಂದಪ್ಪ ತಳವಾರ