Advertisement

ಸರಕು ಸಾಗಾಣಿಕೆಗೆ ಸ್ಥಳೀಯರಿಗೆ ಕೊಡಿ ಅವಕಾಶ

04:16 PM Nov 30, 2018 | |

ಬಳ್ಳಾರಿ: ಜಿಲ್ಲೆಯ ಸ್ಪಾಂಜ್‌ ಐರನ್‌ ಕೈಗಾರಿಕೆಗಳು ಮತ್ತು ಜಿಂದಾಲ್‌ ಕಾರ್ಖಾನೆ ತಮ್ಮ ಸರಕನ್ನು ಸಾಗಿಸಲು ಸ್ಥಳೀಯ ಲಾರಿಗಳಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸ್ಥಳೀಯ ಲಾರಿ ಚಾಲಕರು, ಮಾಲೀಕರು ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ರವೀಂದ್ರನಾಥ್‌ ಒತ್ತಾಯಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸ್ಪಾಂಜ್‌ ಐರನ್‌ ಹಾಗೂ ಜಿಂದಾಲ್‌ ಕಾರ್ಖಾನೆಗಳು ತಮ್ಮ ಸರಕನ್ನು ಸಾಗಿಸಲು ಸ್ಥಳೀಯ ಲಾರಿಗಳಿಗೆ ಅವಕಾಶ ನೀಡದೆ ಹೊರ ರಾಜ್ಯದ ಲಾರಿಗಳಿಗೆ ಮಣೆ ಹಾಕುತ್ತಿವೆ. ಇದರಿಂದ ಸ್ಥಳೀಯ ಲಾರಿ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಜಿಲ್ಲೆಯ ಸ್ಪಾಂಜ್‌ ಐರನ್‌ ಕೈಗಾರಿಕೆಗಳು, ಜಿಂದಾಲ್‌ ಸೇರಿದಂತೆ ಎಲ್ಲ ಕಾರ್ಖಾನೆಗಳು ತಮ್ಮ ಸರಕನ್ನು ರಾಜ್ಯ, ಹೊರ ರಾಜ್ಯಗಳಿಗೆ ಸಾಗಿಸಲು ಸುಮಾರು 4 ಸಾವಿರಕ್ಕೂ ಹೆಚ್ಚು ಲಾರಿಗಳಿಗೆ ಅವಕಾಶ ನೀಡುತ್ತಿದ್ದವು. ಆದರೆ, ನಂತರದ ದಿನಗಳಲ್ಲಿ ಸ್ಥಳೀಯರನ್ನು ಬಿಟ್ಟು, ಹೊರ ರಾಜ್ಯಗಳ ಲಾರಿಗಳಿಗೆ ಸರಕು ಸಾಗಾಣಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದರು.
 
ಈ ಮೊದಲು ಸ್ಥಳೀಯ ಲಾರಿಗಳಿಗೆ ತಿಂಗಳಿಗೆ 10 ಲೋಡ್‌ ಸರಕು ಸಾಗಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ತಿಂಗಳಿಗೆ 3 ರಿಂದ 4 ಲೋಡ್‌ ಮಾತ್ರ ಸಾಗಿಸಲಾಗುತ್ತಿದೆ. ಇದರಿಂದ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗವನ್ನು ನಂಬಿ ಫೈನಾನ್ಸನಲ್ಲಿ ಲಾರಿ ಖರೀದಿಸಿದ ಮಾಲೀಕರು ಈಗ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ನ.19ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಹ ಗಮನಕ್ಕೆ ತಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲೆಯ ಕಾರ್ಖಾನೆಗಳು ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡಬೇಕು. ಲಾರಿ ಬಾಡಿಗೆ ವಿಷಯದಲ್ಲಿ ತಾರತಮ್ಯವಿಲ್ಲದೆ ನಿತ್ಯ ಡಿಸೇಲ್‌ ಬೆಲೆಗೆ ತಕ್ಕಂತೆ ಬಾಡಿಗೆ ನಿಗದಿಪಡಿಸಬೇಕು.

ಲೋಡಿಂಗ್‌, ಅನ್‌ ಲೋಡಿಂಗ್‌ ವಿಳಂಬವಾದರೆ ಆಯಾ ಕಾರ್ಖಾನೆಗಳು ಅಷ್ಟು ದಿನಗಳ ಬಾಡಿಗೆಯನ್ನು ನೀಡಬೇಕು ಎಂದು ಆಗ್ರಹಿಸಿ ಡಿ.15ರಂದು ಜಿಲ್ಲೆಯ ಸ್ಪಾಂಜ್‌ ಐರನ್‌, ಜಿಂದಾಲ್‌ ಸೇರಿದಂತೆ ಎಲ್ಲ ಕಾರ್ಖಾನೆಗಳ ಮುಂದೆ ಲಾರಿಗಳನ್ನು ನಿಲ್ಲಿಸಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಜಿ.ವಿಜಯಭಾಸ್ಕರ್‌ ರೆಡ್ಡಿ, ಕಾರ್ಯದರ್ಶಿ ಎಂ.ಎನ್‌.ಬಸವರಾಜ, ಖಜಾಂಚಿ ಪ್ರವೀಣ್‌ಕುಮಾರ್‌, ಟಿ.ನರಸಿಂಹ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next