ಕೊಪ್ಪಳ: ಜಿಲ್ಲೆಯ ಅರ್ಹ ಮೀನುಗಾರರು ಮೀನುಗಾರಿಕೆ ಇಲಾಖೆ ವಿವಿಧ ಯೋಜನೆಗಳಡಿ ಇರುವ ಸೌಲಭ್ಯಗಳ ಸದುಪಯೋಗಪಡೆದುಕೊಳ್ಳಬೇಕು. ಇಲಾಖೆಯವರು ಸರ್ಕಾರದ ಸೌಲಭ್ಯಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಬೇಕು ಎಂದು ಜಿಪಂ ಉಪಕಾರ್ಯದರ್ಶಿ ಎನ್.ಕೆ. ತೊರವಿ ಹೇಳಿದರು.
ಮೀನುಗಾರಿಕೆ ಇಲಾಖೆಯಿಂದ ತಾಲೂಕಿನ ಶಿವಪುರ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ನಡೆದ ಮೀನು ಕೃಷಿಕರ ದಿನಾಚರಣೆ ಅವರು ಮಾತನಾಡಿದರು.
ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಪಿ.ಬಸವರಾಜ ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ, ಮೀನುಮರಿ ಉತ್ಪಾದನೆ ಹಾಗೂ ಕೆರೆ ವಿಲೇವಾರಿ ಪ್ರಕ್ರಿಯೆ ಕುರಿತು ಮೀನುಗಾರರಿಗೆ ಮಾಹಿತಿ ನೀಡಿದರು.
ಮೀನುಗಾರಿಕೆ ಸಹಾಯಕ ನಿರ್ದೇಶಕ ಕೆ. ಚಂದ್ರಶೇಖರ ಮಾತನಾಡಿ, ಮೀನು ಕೃಷಿಕರ ದಿನಾಚರಣೆಯನ್ನು 1957 ಜು.10 ರಂದು ಡಾ. ಹಿರಾಲಾಲ್ ಚೌಧರಿ ಮತ್ತು ಡಾ. ಆಲಿಕುನಿ ಎಂಬ ಮೀನುಗಾರಿಕೆ ವಿಜ್ಞಾನಿಗಳ ಪರಿಶ್ರಮದಿಂದಾಗಿ ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ನಿಂತ ನೀರಿನಲ್ಲಿ ಓವಾಪ್ರಿಮ್ ಮತ್ತು ಓವಾಟೈಡ್ ಎಂಬ ಹಾರ್ಮೋನ್ ಬಳಸಿ ಮೀನುಮರಿ ಸಂತಾನೋತ್ಪತ್ತಿ ಪ್ರಾರಂಭಿಸಿದರು. ಅಂದಿನಿಂದ ಮೀನುಗಾರಿಕೆ ಕ್ರಾಂತಿಯಲ್ಲಿ ನಮ್ಮ ದೇಶ ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಮೀನು ಉತ್ಪಾದಿಸುವ ದೇಶವಾಗಿ ನೀಲಿ ಕ್ರಾಂತಿಯನ್ನೇ ಪ್ರಾರಂಭಿಸಿತು ಎಂದು ತಿಳಿಸಿದರು.
ದೇಶದಲ್ಲಿ 40 ಲಕ್ಷ ಮೀನುಗಾರರಿದ್ದು, 2017-18ನೇ ಸಾಲಿನ ಅಂದಾಜು ಪ್ರಕಾರ ಇಂದು ದೇಶದಲ್ಲಿ 12.60 ಮಿ.ಮೆ. ಟನ್‌ನಷ್ಟು ಮೀನು ಉತ್ಪಾದನೆಯಾಗುತ್ತಿದೆ. ಅದರಲ್ಲಿ 13.37 ಲಕ್ಷ ಟನ್ ಮೀನು ಉತ್ಪನ್ನ ವಿದೇಶಕ್ಕೆ ರಫ್ತಾಗುತ್ತಿದ್ದು, ಇದರಿಂದ 45.106.89 ಕೋಟಿ ಆದಾಯ ಸರ್ಕಾರಕ್ಕೆ ಬರುತ್ತಿದೆ. ಮೀನುಗಾರಿಕೆ ಕ್ಷೇತ್ರವು ದೇಶದ ಒಟ್ಟು ಜಿಡಿಪಿ ಶೇ.0.91 ಮತ್ತು ಕೃಷಿ ಜಿಡಿಪಿಯ ಶೇ.5.22 ಕೊಡುಗೆ ನೀಡುತ್ತಿದೆ ಎಂದರು. ಕೊಪ್ಪಳ ತಾಪಂ ಇಒ ಟಿ. ಕೃಷ್ಣಮೂರ್ತಿ, ಮೀನುಗಾರಿಕೆ ಸಹಾಯಕ ನಿರ್ದೇಶಕ ಶಿವಪುರ ರಜನೀಶ್, ಗಂಗಾವತಿ ಮೀನುಗಾರಿಕೆ ಸಹಾಯಕ ನಿರ್ದೇಶಕ ಆನಂದ ಸೇರಿದಂತೆ ಇತರರಿದ್ದರು.