ಆಳಂದ: ದೇಶ ಮತ್ತು ರಾಜ್ಯ ಕಟ್ಟುವಲ್ಲಿ ಕಾರ್ಮಿಕರ ಕೊಡುಗೆಯಿದೆ ಎಂಬುದನ್ನು ಮರೆಯದೇ, ಸರ್ಕಾರಗಳು ಹಕ್ಕು ಮತ್ತು ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷೆ ಶಶಿಕಲಾ ಪಾಟೀಲ ಕಡಗಂಚಿ ಒತ್ತಾಯಿಸಿದರು.
ಪಟ್ಟಣದ ಗುರುಭವನ ಆವರಣದಲ್ಲಿ ಸಿಐಟಿಯು ತಾಲೂಕು ಘಟಕ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಳುವ ಸರ್ಕಾರ ಕಾರ್ಮಿಕರ ಧ್ವನಿ ಅಡಗಿಸುವ ಕೆಲಸ ಮಾಡುವುದರ ಜತೆಗೆ, ಹಕ್ಕು ಮೊಟಕುಗೊಳಿಸುವ ತಂತ್ರಗಾರಿಕೆಗಳನ್ನು ನಡೆಸುತ್ತವೆ. ಇದರ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ಹೋರಾಟ ಕೈಗೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಪಾಂಡುರಂಗ ಮಾವೀನಕರ್ ಮಾತನಾಡಿ, ಬೆವರು ಸುರಿಸಿ ದುಡಿಯುವ ಕಾರ್ಮಿಕರ ಬೆವರಿನ ಪಾಲನ್ನು ಕೇಳಿದರೆ ಸರ್ಕಾರ ಸ್ಪಂದಿಸುತ್ತಿಲ್ಲ. ತುಂಡು ಭೂಮಿಯಿಲ್ಲ. ಒಂದು ದೇಶವಲ್ಲ ಇಡೀ ಭೂಗೋಳವನ್ನೇ ಕೇಳುವೆವು. ಜಾತಿ, ಧರ್ಮದ ಹೆಸರಿನಲ್ಲಿ ಕಾರ್ಮಿಕರ ಐಕತ್ಯೆಯನ್ನು ಒಡೆಯುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ. ಕೂಡಲೇ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು. ದುಡಿಯುವ ವರ್ಗಕ್ಕೆ ಕನಿಷ್ಟ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸಿದ ಸಿಐಟಿಯು ತಾಲೂಕು ಅಧ್ಯಕ್ಷ ರಾಜಮತಿ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಬಿಸಿಯೂಟ ನೌಕರ ಸಂಘದ ಅಧ್ಯಕ್ಷೆ ರೇಖಾ ರಂಗನ ಮಾತನಾಡಿದರು.
ಡಿವೈಎಫ್‌ಐ ಮುಖಂಡ ಫಯಾಜ್ ಪಟೇಲ, ಎಸ್‌ಎಫ್‌ಐ ಜಿಲ್ಲಾ ಮುಖಂಡ ಸರ್ವೇಶ ಮಾವೀನಕರ್, ಭಾಗಣ್ಣಾ ಆಳಂದ, ಸುಶೀಲಾಬಾಯಿ, ಅನುಸುಬಾಯಿ, ಶಶಿಕಲಾ ಶರಣನಗರ, ಕಲಾವತಿ, ಗಂಗುಬಾಯಿ, ಭೌರಮ್ಮ ಮತ್ತು ಮಹಾದೇವಿ ಮತ್ತಿತರರು ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆ ಸಂಘದ ಅಧ್ಯಕ್ಷೆ ಪುಷ್ಪಾವತಿ ಚಟ್ಟಿ ನಿರೂಪಿಸಿ, ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಸಂಘದ ಪದಾಧಿಕಾರಿ ಬಂಡಮ್ಮಾ ಆಳಂದ ವಂದಿಸಿದರು