Advertisement

ಮೆಗ್ಗಾನ್‌ ಆಸ್ಪತ್ರೆಗೆ ಸೌಲಭ್ಯ ನೀಡಿ: ಶ್ರೀಪಾಲ್‌

03:10 PM Aug 10, 2020 | Suhan S |

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಎಲ್ಲರೂ ಕೊರೊನಾ ವಿರುದ್ಧ ಹೋರಾಡುವುದಾಗಿ ತಿಳಿಸುತ್ತಿದ್ದಾರೆ. ಇವರೆಲ್ಲರೂ ತಲಾ ಒಂದೊಂದು ಆಕ್ಸಿಜನ್‌ ಯಂತ್ರವನ್ನು ದಾನವಾಗಿ ಮೆಗ್ಗಾನ್‌ ಆಸ್ಪತ್ರೆಗೆ ನೀಡಬೇಕು ಎಂದು ಸ್ವರಾಜ್‌ ಇಂಡಿಯಾ ಜಿಲ್ಲಾ ವಕ್ತಾರ ಕೆ.ಪಿ. ಶ್ರೀಪಾಲ್‌ ಪ್ರತಿಯೊಬ್ಬರಿಗೂ ಪತ್ರ ಬರೆದು ಆಗ್ರಹಿಸಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಹರಡುತ್ತಿದೆ. ಈಗಾಗಲೇ 2500 ದಾಟಿದೆ. ಗುಣ ಮುಖರಾಗುತ್ತಿದ್ದರೂ ಕೂಡ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಕೂಡ 50 ದಾಟಿರುವುದು ಆತಂಕ ಹುಟ್ಟಿಸುತ್ತಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ 40 ವರ್ಷದ ಒಳಗಿನವರೂ ಸಹ ಉಸಿರಾಟದ ತೊಂದರೆಗೆ ಒಳಗಾಗುತ್ತಿದ್ದಾರೆ. ಈಗ ಅಲ್ಲಿ ಇರುವುದು ಕೇವಲ 7 ವೆಂಟಿಲೇಟರ್‌ ಮತ್ತು 7 ಆಕ್ಸಿಜನ್‌ ಯಂತ್ರಗಳು ಮಾತ್ರ. ಆದರೆ ರೋಗಿಗಳ ಸಂಖ್ಯೆ ಮಾತ್ರ ಸಾವಿರಕ್ಕೂ ಹೆಚ್ಚಿದೆ. ಹೀಗಾಗಿ ಆಕ್ಸಿಜನ್‌ ಕೊರತೆಯಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿರುವುದು ದುರಾದೃಷ್ಟಕರ. ಜಿಲ್ಲೆಯ ಪ್ರತಿನಿ ಧಿಗಳು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಒಂದು ಆಕ್ಸಿಜನ್‌ ಯಂತ್ರದ ಬೆಲೆ 2.5 ಲಕ್ಷ ಆಗಬಹುದು. ಇಷ್ಟೊಂದು ಹಣದ ಯಂತ್ರ ನೀಡುವ ಶಕ್ತಿ ನಿಮ್ಮಲ್ಲಿ ಖಂಡಿತಾ ಇದೆ ಎಂದು ಭಾವಿಸುತ್ತೇನೆ.

ಒಂದು ಪಕ್ಷ ಇಲ್ಲದಿದ್ದರೆ ನಿಮ್ಮ ಶಾಸಕರು, ಸಂಸದರ ನಿಧಿಯಿಂದ ನೀಡುವ ಮೂಲಕ ಮಾದರಿಯಾಗಿ. ನಿಮ್ಮ ಈ ಕಾರ್ಯದಿಂದ ಇಡೀ ಜಿಲ್ಲೆಯ ಜನರು ನಿಮ್ಮನ್ನು ಸ್ಮರಿಸುತ್ತಾರೆ. ಅಷ್ಟೇ ಅಲ್ಲ ನೀವು ದೇಶಕ್ಕೆ ಮಾದರಿಯಾಗಿ ನಿಲ್ಲುತ್ತೀರಿ. ಸ್ವರಾಜ್‌ ಇಂಡಿಯಾ ಮನವಿಯನ್ನು ನೀವು ಈಡೇರಿಸುತ್ತೀರೆಂಬ ನಂಬಿಕೆ ನಮಗಿದೆ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸೌಲಭ್ಯಗಳೇ ಇಲ್ಲವಾಗಿದೆ. ಹೀಗಾಗಿ ಕೂಡಲೇ 50 ವೆಂಟಿಲೇಟರ್‌ ಹಾಗೂ 50 ಆಕ್ಸಿಜನ್‌ ಸೌಲಭ್ಯ ಒದಗಿಸುವ (ಎಚ್‌ಎಫ್‌ಎನ್‌ಸಿ) ಯಂತ್ರಗಳ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕೆ.ಪಿ. ಶ್ರೀಪಾಲ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next