ಸಿಂದಗಿ: ಪಟ್ಟಣದಲ್ಲಿ ಕಾಯಿಪಲ್ಲೆ, ಹಣ್ಣು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಒದಗಿಸಬೇಕು ಎಂದು ಸ್ಥಳೀಯ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಾಗವಾನರು ಹಾಗೂ ಮಾರಾಟಗಾರರು ಹಮ್ಮಿಕೊಂಡಿರುವ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಧರಣಿ ಮಾಡಲಾಗುತ್ತಿದ್ದು ಸಾರ್ವಜನಿಕರು ತರಕಾರಿಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಅನೇಕ ಗ್ರಾಮಗಳಿಂದ ನಿತ್ಯ ರೈತರು ತರಕಾರಿಗಳನ್ನು ತಂದು ಮಾರಾಟ ಬಂದಾಗಿರುವುದರಿಂದ ತೋಟದಲ್ಲಿ ಬೆಳೆದ ತರಕಾರಿಗಳು ಹಾಳಾಗುತ್ತಿದೆ. ಹೋರಾಟಗಾರರ ಬೇಡಿಕೆಗಳಿಗೆ ಸಚಿವ ಎಂ.ಸಿ. ಮನಗೂಳಿ ಅವರು ಇನ್ನೂವರೆಗೂ ಸ್ಪಂದಿಸಿಲ್ಲ ಎಂಬುದು ಹೋರಾಟಗಾರರಿಗೆ ಬೇಸರ ತಂದಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಂದಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಿಠuಲ ಕೊಳ್ಳೂರ ಅವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಸಿಂದಗಿ ಪಟ್ಟಣ ನಗರ ಪಾಲಿಕೆಯಾಗುವಷ್ಟು ಬೃಹತ್ತಾಗಿ ಬೆಳೆಯುತ್ತಿದೆ. ಪಟ್ಟಣದಲ್ಲಿ ತರಕಾರಿ ಮತ್ತು ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಸಾರ್ವಜನಿಕರಿಗೆ, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅವರಿಗೆ ಸೂಕ್ತ ಮಾರುಕಟ್ಟೆ ಅಗತ್ಯದೆ ಇದೆ. ತರಕಾರಿ ಮತ್ತು ಹಣ್ಣು ಮಾರಾಟಗಾರರ ಹೋರಾಟ ನ್ಯಾಯಯುತವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡೆಸಿದರು.
ಸಿಂದಗಿ ಪಟ್ಟಣದಲ್ಲಿನ ಹಳೆ ಬಜಾರದಲ್ಲಿ ಹಾಳು ಬಿದ್ದ ಮಾರುಕಟ್ಟೆಗೆ ಪುನಶ್ಚೇತನ ನೀಡಿ ಅಲ್ಲಿ ಸುಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಲು ಸಾಧ್ಯ. ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಜಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಲು ಸಾಧ್ಯ. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತರಕಾರಿ ಮತ್ತು ಹಣ್ಣು ಮಾರಾಟ ಮಾಡಲು ಸ್ಥಳಾವಕಾಶ ಮಾಡಬೇಕು. ಹೀಗೆ ಪಟ್ಟಣದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಮೂರು ಸ್ಥಳಾವಕಾಶಗಳಿಗೆ ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ತರಕಾರಿ ಮಾರಾಟ ಸ್ಥಗಿತಗೊಂಡ ಕಾರಣ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಸ್ವತಃ ಭೇಟಿ ನೀಡಿ ತರಕಾರಿ ಮತ್ತು ಹಣ್ಣು ಮಾರಾಟಗಾರರ ತೊಂದರೆ ಮನವರಿಕೆ ಮಾಡಿ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ವಿರೋಧ ಪಕ್ಷ ಬಿಜೆಪಿಯವರು ಅಧಿಕಾರಕ್ಕಾಗಿ ಕಳೆದ 15 ದಿನಗಳಿಂದ ದೊಂಬರಾಟವಾಡುತ್ತಿದ್ದಾರೆ. ವಿರೋಧ ಪಕ್ಷದವರ ನಡೆ ಖಂಡನೀಯವಾಗಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಇಕ್ಬಾಲ್ ತಲಕಾರಿ, ಅಧ್ಯಕ್ಷ ಸೈಫನ್ ನಾಟೀಕಾರ, ಉಪಾಧ್ಯಕ್ಷ ಹಾಜಿಗುಲಾಬಸಾಬ ಮರ್ತೂರ, ಬಸೀರಸಾಬ ಮರ್ತೂರ, ಬಂದೇನವಾಜ ಶಾಪುರ, ರಾಜು ಖೇಡ, ಮಹೀಬುಬಸಾಬ ಅಳ್ಳೋಳ್ಳಿ, ಹಮಿದಾ ಅಳ್ಳೊಳ್ಳಿ, ಜೈಫುನ್ ಬಮ್ಮನಜೋಗಿ, ಖಾಜಾಮಾ ಮರ್ತೂರ, ಮಹಾದೇವಿ ಮನ್ನಾಪುರ, ಗುರುತಾಯಿ ಹಿರೇಮಠ, ಪಾರ್ವತಿ ಬಗಲಿ ಸೇರಿದಂತೆ ಕಾಯಿಪಲ್ಲೆ ಮಾರಾಟಗಾರರು, ಬಾಗವಾನರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಮಾರುಕಟ್ಟೆ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿರುವ ತರಕಾರಿ ಮತ್ತು ಹಣ್ಣು ಮಾರಾಟಗಾರರ ಹೋರಾಟಕ್ಕೆ ಹಣ್ಣು ಮಾರಾಟಗಾರರು ಎರಡು ದಿನ ಬೆಂಬಲಿಸಿ ಮೂರನೆ ದಿನ ಎಂದಿನಂತೆ ಹಣ್ಣು ಮಾರಾಟಗಾರರು ಮಾತ್ರ ಸೋಮವಾರ ಹಣ್ಣು ಮಾರಾಟ ಪ್ರಾರಂಭಿಸಿದರು. ಆದರೆ ರೈತರು ಬೆಳೆದ ತರಕಾರಿಗಳು ತೋಟದಲ್ಲಿ ಹಾಳಾಗುತ್ತಿದೆ. ಇದರಿಂದ ರೈತರಿಗೂ ಹಾಗೂ ಸಾರ್ವಜನಿಕರಿಗೂ ತುಂಬಾತೊಂದರೆಯಾಗುತ್ತಿದೆ.