Advertisement

Drought: ಬರ ಪರಿಹಾರ ಕೊಡಿ ಇಲ್ಲವೇ ಕುರ್ಚಿ ಬಿಡಿ: ಬಿಜೆಪಿ ಅಭಿಯಾನ

09:23 PM Jan 28, 2024 | Team Udayavani |

ಬೆಂಗಳೂರು: “ರೈತರಿಗೆ ಬರ ಪರಿಹಾರ ಕೊಡಿ, ಇಲ್ಲವೇ ಕುರ್ಚಿ ಬಿಡಿ” ಎಂಬ ಘೋಷಣೆಯೊಂದಿಗೆ ಕೋಲಾರದಲ್ಲಿ ಜ. 29ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು.

Advertisement

ರವಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಧಿವೇಶನಕ್ಕೆ ಮುನ್ನ ರೈತರಿಗೆ ಬರ ಪರಿಹಾರ ಕೊಡುವುದಾಗಿ ಘೋಷಿಸಿದ್ದ ಸಿಎಂ ಅಧಿವೇಶನದಲ್ಲೂ ವೀರಾವೇಶದ ಭಾಷಣ ಮಾಡಿದ್ದರು. ಇಷ್ಟು ಬಜೆಟ್‌ ಮಂಡಿಸಿರುವ ಅವರು ಜನರಿಗೆ ಟೋಪಿ ಹಾಕುವುದು ಹೇಗೆಂದು ಕಲಿತಿದ್ದಾರೆ. ಇವರನ್ನು ಟೋಪಿ ಸಿದ್ದರಾಮಯ್ಯ ಎಂದು ಕರೆಯಬಹುದೆಂದು ಟೀಕಿಸಿದರು.

ರೈತರು ಕಣ್ಣೀರು ಹಾಕುತ್ತಿರುವಾಗ ಅಲ್ಪಸಂಖ್ಯಾಕರಿಗೆ 10 ಸಾವಿರ ಕೋಟಿ ರೂ. ನೀಡುತ್ತೇನೆಂದು ಹೇಳಿ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಆದರೆ ರೈತರಿಗೆ 105 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಆದ್ದರಿಂದ ಸೋಮವಾರ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ವಿದ್ಯುತ್‌ ಕಡಿತ, ಕಾಮಗಾರಿ ಸ್ಥಗಿತ ವಿರುದ್ಧ ಜ. 30ರಂದು ದೊಡ್ಡಬಳ್ಳಾಪುರದಲ್ಲಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಕಾಫಿ ಬೆಳೆಗಾರರಿಗೆ ಗುತ್ತಿಗೆಗೆ ಜಮೀನು ನೀಡಿದ್ದು, ಜಿಲ್ಲಾಧಿಕಾರಿಗಳು ರೈತರಿಗೆ ನೆರವಾಗುತ್ತಿಲ್ಲ. ಇದರ ವಿರುದ್ಧವೂ ಕಾಫಿ ಬೆಳೆಗಾರರಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇನೆ. ಪ್ರತೀ ಜಿಲ್ಲೆಯಲ್ಲಿ ನಾನು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಭಟಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಹೆಣ ಹೊರಲೂ ಹಣವಿಲ್ಲ
ನಮ್ಮ ಅವಧಿಯಲ್ಲಿ ಹೆಚ್ಚುವರಿ ಇದ್ದ ವಿದ್ಯುತ್‌, ನೀರು ಈಗ ಖಾಲಿ ಆಗಿದೆ. ಏಳು ತಾಸು ವಿದ್ಯುತ್‌ ಎಂದು ಹೇಳಿ ಮೂರು ತಾಸು ಕೊಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರೋಪಿಸಿದ್ದಾರೆ. ಈಗ ಸರಕಾರದಲ್ಲಿ ಹೆಣ ಹೊರುವುದಕ್ಕೂ ಹಣ ಇಲ್ಲ. ಎಲ್ಲರಿಗೂ ಸಂಪುಟ ದರ್ಜೆ ಸ್ಥಾನ ನೀಡಿ, ಸಲಹೆಗಾರರನ್ನು ನೇಮಿಸಿಕೊಂಡು ಉಡಾಫೆಯಾಗಿ ಹಣ ಖರ್ಚು ಮಾಡುತ್ತಿದ್ದಾರೆ. ದುಂದುವೆಚ್ಚಕ್ಕೆ ಕಡಿವಾಣ ಹಾಕದೆ, ರೈತರಿಗೆ ಹಣ ಕೊಡದೇ ಇರುವ ಈ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

Advertisement

ಪ್ರಧಾನಿ ಮೋದಿಯದ್ದೇ ನೈಜ ಗ್ಯಾರಂಟಿ:
ವಿತ್ತೀಯ ಶಿಸ್ತಿಗೆ ಹೆಸರಾಗಿದ್ದ ಕರ್ನಾಟಕ ಸರಕಾರ ಈಗ ಅಶಿಸ್ತಿಗೆ ಹೆಸರಾಗಿದೆ. ವೈದ್ಯರು, ಅಂಗನವಾಡಿ ನೌಕರರಿಗೆ ನೀಡಲು ಹಣವಿಲ್ಲ, ಕಾಮಗಾರಿಗಳು ಸ್ಥಗಿತವಾಗಿದೆ. ಸರಕಾರ ಸಂಪೂರ್ಣ ದಿವಾಳಿಯಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಡುತ್ತಿರುವ ಅಕ್ಕಿಯನ್ನೇ ರಾಜ್ಯ ಕಾಂಗ್ರೆಸ್‌ ಸರಕಾರ ಅನ್ನಭಾಗ್ಯ ಎನ್ನುತ್ತಿದೆ. ಎಲ್ಲರಿಗೂ ಉಚಿತ ಎಂದಿದ್ದ ವಿದ್ಯುತ್‌ಗೂ 200 ಯುನಿಟ್‌ನ ಮಿತಿ ವಿಧಿಸಿದೆ ಎಂದು ಆರ್‌. ಅಶೋಕ್‌ ದೂರಿದರು. ದೇಶಕ್ಕೆ ಪ್ರಧಾನಿ ಮೋದಿ ಅವರೇ ನೈಜ ಗ್ಯಾರಂಟಿ. ಜಮ್ಮು -ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದರು. ರೈತರಿಗೆ ಕಿಸಾನ್‌ ಸಮ್ಮಾನ್‌ ಜಾರಿಗೊಳಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ಕಾಂಗ್ರೆಸಿಗರು ರಾಜಕೀಯಕ್ಕಾಗಿ ರಾಮನಾಮ ಜಪಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮಾಡಿದ ಮೂರು ರಾಜ್ಯಗಳು ಕೈತಪ್ಪಿವೆ. ಈಗ ನಿತೀಶ್‌ ಕುಮಾರ್‌ ಕಾಂಗ್ರೆಸ್‌ ಛೋಡೋ ಎಂದಿದ್ದಾರೆ. ಅವರು ಕಾಲಿಟ್ಟಲ್ಲೆಲ್ಲ ಸರಕಾರ ಬೀಳುತ್ತದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next