Advertisement

ಟ್ಯಾಂಕರ್‌ನಿಂದ ಕುಡಿಯುವ ನೀರು ಪೂರೈಸಿ

09:35 AM May 22, 2019 | Team Udayavani |

ಹಾವೇರಿ: ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾದ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲೆಯ ಕುಡಿಯುವ ನೀರು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಕುರಿತಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ವಿವಿಧ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆ ಆಲಿಸಲು ಸ್ಥಾಪಿಸಲಾದ ಸಹಾಯವಾಣಿಗಳ ಸೇವೆಯಲ್ಲಿ ಯಾವುದೇ ನ್ಯೂನತೆಯಾಗದಂತೆ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸಲಹೆ ನೀಡಿದರು.

ಖಾಸಗಿ ಕೊಳವೆಬಾವಿ ಮೂಲಕ ಕುಡಿಯುವ ನೀರು ಪೂರೈಸುವ ಕೆಲ ಗ್ರಾಮಗಳಲ್ಲಿ ಕೊಳವೆಬಾವಿಯಲ್ಲಿ ನೀರಿನ ಇಳುವರಿ ಇಳಿಮುಖವಾಗುತ್ತಿರುವ ಮಾಹಿತಿ ಬಂದಿದೆ. ಈ ಕುರಿತಂತೆ ಅಂತರ್ಜಲ ಇಲಾಖೆಯಿಂದ ಪರಿಶೀಲನೆ ನಡೆಸಬೇಕು. ನಿಗದಿತ ಪ್ರಮಾಣದಲ್ಲಿ ಜನರಿಗೆ ನೀರು ಪೂರೈಸಲು ಪರ್ಯಾಯ ಕ್ರಮಗಳ ಕುರಿತಂತೆ ತ್ವರಿತವಾಗಿ ಕ್ರಮವಹಿಸಬೇಕು. ಟ್ಯಾಂಕರ್‌ ಮೂಲಕ ನೀರು ಪೂರೈಸುವುದು ಅನಿವಾರ್ಯವಾದರೆ ತ್ವರಿತವಾಗಿ ಟ್ಯಾಂಕರ್‌ ಬಳಸಿ ಎಂದು ಸೂಚಿಸಿದರು.

ಈ ವಾರ ಮಳೆಯಾಗದಿದ್ದರೆ ಮತ್ತಷ್ಟು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ವಿಶೇಷವಾಗಿ ಬ್ಯಾಡಗಿ ಹಾಗೂ ಹಿರೇಕೆರೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಬಹುದು. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಪರ್ಯಾಯ ನೀರು ಪೂರೈಕೆಗೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು. ಜನರು ನೀರಿನ ಸಮಸ್ಯೆ ಕುರಿತಂತೆ ದೂರು ಸಲ್ಲಿಸಿದ ತಕ್ಷಣ ಸ್ಪಂದಿಸಿ ನೀರು ಒದಗಿಸಬೇಕು ಎಂದು ಸೂಚಿಸಿದರು.

Advertisement

ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ನಿಗದಿತ ಗುರಿಯಂತೆ ತಾಲೂಕಾವಾರು ಮಾನವ ದಿನಗಳ ಸೃಜನೆಯಾಗಬೇಕು. ಜಲಪೂರಣ, ಕೆರೆಹೂಳೆತ್ತುವುದು, ಕೊಳವೆಬಾವಿಗಳ ಜಲಮರುಪೂರಣ, ಕಾಲುವೆಗಳ ಸ್ವಚ್ಛತೆ, ಬದುಗಳ ನಿರ್ಮಾಣ, ಚೆಕ್‌ ಡ್ಯಾಂ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಜಲಮೂಲಗಳ ಹಾಗೂ ಜಲ ಸಂಗ್ರಹಳ ಪುನಶ್ಚೇತನಕ್ಕೆ ಆದ್ಯತೆ ನೀಡುವಂತೆ ತಾಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದರು.

ಉದ್ಯೋಗ ಕೊಡಿ: ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆ ಸೇರಿದಂತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಗಳು ಉದ್ಯೋಗ ಖಾತ್ರಿಯಡಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ನಿಗದಿತ ಗುರಿಯಂತೆ ಕಾಲಮಿತಿಯೊಳಗೆ ಕಾಮಗಾರಿಗಳ ಅನುಷ್ಠಾಗೊಳಿಸಿ ಮಾನವ ದಿನಗಳನ್ನು ಸೃಜಿಸುವಂತೆ ನಿರ್ದೇಶನ ನೀಡಿದರು. ಪಂಚಾಯತರಾಜ್‌ ಎಂಜಿನಿಯರಿಂಗ್‌ ವಿಭಾಗದಿಂದ ಕೆರೆಗಳ ಪುನಶ್ಚೇತನ, ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಿದರು. ಈ ವಾರದಲ್ಲಿ ಕಾಮಗಾರಿಗಳನ್ನು ಆರಂಭಿಸುವಂತೆ ಸೂಚನೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಲೀಲಾವತಿ, ಪ್ರಸಕ್ತ ಸಾಲಿನಲ್ಲಿ ವಾರ್ಷಿಕ 42ಲಕ್ಷ ಮಾನವ ದಿನಗಳ ಗುರಿ ಎದುರು 4.6 ಮಾನವ ದಿನಗಳನ್ನು ಸೃಜಿಸಲಾಗಿದೆ. ಜಲ ಮೂಲಗಳ ಪುನಶ್ಚೇತನಕ್ಕೆ ಹಾಗೂ ಜಲ ಸಂಗ್ರಹಗಳ ಪುನಶ್ಚೇತನ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಬರದ ಸಂದರ್ಭದಲ್ಲಿ ಜನರಿಗೆ ಉದ್ಯೋಗ ನೀಡಲು ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 5.8 ಲಕ್ಷ ಮಾನದ ದಿನಗಳ ಸೃಜನೆ ಎದುರು 4.6 ಲಕ್ಷ ಗುರಿ ಸಾಧಿಸಲಾಗಿದೆ. ಶೇ.78 .86ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ತ್ವರಿತವಾಗಿ ಸ್ಪಂದಿಸಲು ಈಗಾಗಲೇ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಸ್ಥಳದಲ್ಲೇ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ನಿಗದಿಯಂತೆ ಪ್ರತಿ ದಿನಕ್ಕೆ ತಲಾ 40 ಲೀಟರ್‌ನಂತೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಬ್ಯಾಡಗಿ ಮತ್ತು ಹಾನಗಲ್ಲನಲ್ಲಿ ಶುಂಠಿ ಕೃಷಿ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗೆ ಕೂಲಿಕಾರರ ಕೊರೆತೆ ಉಂಟಾಗಿದೆ. ವಾರದಲ್ಲಿ ಶುಂಠಿ ಬೆಳೆ ಬೇಸಾಯ ಕೆಲಸ ಮುಕ್ತಾಯಗೊಳ್ಳಲಿದೆ. ಉದ್ಯೋಗ ಖಾತ್ರಿ ಕಾಮಗಾರಿಗೆ ಕೂಲಿಕಾರರು ಆಗಮಿಸಲಿದ್ದು, ನಿಗಧಿತ ಗುರಿ ಸಾಧಿಸಲಾಗುವುದು ಎಂದು ಉಭಯ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಣಾಧಿಕಾರಿಗಳು ಸಭೆಗೆ ತಿಳಿಸಿದರು.

ನೋಟೀಸ್‌ ಜಾರಿ: ಸಭೆಗಳಿಗೆ ಸತತವಾಗಿ ಗೈರಾಗುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೊಟೀಸ್‌ ಜಾರಿಗೊಳಿಸಲು ಸೂಚನೆ ನೀಡಿದರು. ಈ ಕುರಿತಂತೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರು, ಜಿಪಂ ಎಂಜಿನಿಯರಿಂಗ್‌ ವಿಭಾಗದ ಅಭಿಯಂತರರು, ಎಲ್ಲ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳು, ರೇಷ್ಮೆ ಇಲಾಖೆ ಉಪ ನಿರ್ದೇಶಕರು ಹಾಗೂ ವಿವಿಧ ಇಲಾಖೆಯ ಉಪ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next