ಮುಂಡಗೋಡ: ಈ ಮೊದಲು ಮಹಿಳೆಯನ್ನು ಭೋಗದ ವಸ್ತುವಾಗಿ ಪರಿಗಣಿಸಲಾಗಿತ್ತು. ಅವಳಿಗೆ ನಿರ್ಧಾರ ತೆಗೆದುಕೊಳ್ಳುವ ಹಾಗೂ ಮಾತನಾಡುವ ಹಕ್ಕನ್ನು ಕೊಟ್ಟಿರಲಿಲ್ಲ ಎಂದು ಪ್ರಭಾರಿ ಸಿಡಿಪಿಒ ದೀಪಾ ಬಂಗೇರ ಹೇಳಿದರು ಅವರು ಲೊಯೋಲ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಸಿಸಿಎಫ್ ಲೊಯೋಲ ಜನಸ್ಫೂರ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಲೊಯೋಲ ವಿಕಾಸ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಈ ಬಾರಿ ನಾಯಕತ್ವದಲ್ಲಿ ಮಹಿಳೆಯರು ಕೋವಿಡ್ 19 ಪ್ರಪಂಚದಲ್ಲಿ ಸಮಾನತೆಯ ಭವಿಷ್ಯವನ್ನು ಸಾಧಿಸುವರು ಶೀರ್ಷಿಕೆಯಡಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುರುಷರೆಲ್ಲಾ ಮಹಿಳೆಯನ್ನು ಪೂಜನೀಯವಾಗಿ ದೇವತೆಯಾಗಿ ಮತ್ತು ತಾಯಿಯಾಗಿ ನೊಡುತ್ತೀರಿ. ಮಹಿಳೆ ತಾಯಿಯಾಗಿ, ಮಗಳಾಗಿ, ತಂಗಿಯಾಗಿ, ಅಕ್ಕ, ಅಜ್ಜಿ, ಮತ್ತು ಹೆಂಡತಿಯಾಗಿ ಅನೇಕ ರೀತಿಯ ಸೇವೆ ಸಲ್ಲಿಸುವಳು. ಅವಳ ತಾಳ್ಮೆ ಅವಿರತ ಪರಿಶ್ರಮ ಗಂಡಸರಲ್ಲಿಯೂ ಬರಬೇಕು ಎಂದರು. ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಜೆರಾಲ್ಡ್ ಡಿಸೋಜಾ ಪ್ರಾಸ್ತಾವಿಕ ಮಾತನಾಡಿ, ನಾಯಕತ್ವದಲ್ಲಿ ಮಹಿಳೆಯರು ಕೋವಿಡ್-19ರ ಪ್ರಪಂಚದಲ್ಲಿ ಸಮಾನತೆಯ ಭವಿಷ್ಯವನ್ನು ಸಾಧಿ ಸುವರು ಈ ವಿಷಯವನ್ನು ನಾವು ಈ ಸಾಲಿನಲ್ಲಿ ನೋಡಿದಾಗ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಿದವರು ಮತ್ತು ಮುಂಚೂಣಿಯಲ್ಲಿದ್ದವರು ಮಹಿಳೆಯರು. ಬರುವ ದಿನಗಳಲ್ಲಿ ಗಂಡು ಹೆಣ್ಣು ಎನ್ನುವ ಭೇದ-ಭಾವ ದೂರವಾಗಿ ಸಮಾನತೆ ಬರಬೇಕು.
ರಾಜಕೀಯವಾಗಿ ಬಹಳಷ್ಟು ಸಾಧಿಸುವುದರಲ್ಲಿ ಮಹಿಳೆಯರಿಗೆ ಇನ್ನಷ್ಟು ಅವಕಾಶಗಳು ಸಿಗಬೇಕು. ವಿಶ್ವ ಸಂಸ್ಥೆ ಆಶಯದಂತೆ 2030ರ ವೇಳೆಗೆ ಸಮಾನತೆ ಸಾಧಿಸಬೇಕು ಎಂದರು.
ಲೊಯೋಲ ಸಮೂಹ ಸಂಸ್ಥೆಗಳ ಮುಖ್ಯಸ್ಥ ಪ್ರಾನ್ಸಿಸ್ ಮೆನೆಜಿಸ್ ಮಾತನಾಡಿ, ಮಹಿಳೆಯರು ನಿಮ್ಮ ಹೆಣ್ಣುಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರನ್ನು ಮುಂದೆ ತಂದರೆ ಮಕ್ಕಳು ಮತ್ತು ಮೊಮ್ಮಕ್ಕಳು ನಿಮ್ಮ ಆಸ್ತಿಯಾಗಿ ಹಾಗೂ ಸಮಾನತೆ ಫಲವನ್ನು ಪಡೆಯಲು ಸಾಧ್ಯ ಎಂದರು. ಮಹಿಳಾ ಹೋರಾಟಗಾರ್ತಿ ಸುಮನ್ ಗಾಂವಕರ ಮಾತನಾಡಿ, ನಾನು ಮಹಿಳಾ ಹೊರಾಟಗಾರ್ತಿಯಾಗಿ ಹಾಗೂ ಕಟ್ಟಡ ಕಾರ್ಮಿಕರು ಹಾಗೂ ಎಲ್ಲ ಕಾರ್ಮಿಕ ವರ್ಗದ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಕಾರ್ಮಿಕ ಇಲಾಖೆಯಲ್ಲಿನ ಕಾಯ್ದೆ ಹಾಗೂ ತಿದ್ದುಪಡಿ ಮತ್ತು ಸೌಲಭ್ಯಗಳಿಗಾಗಿ ಮೊಟ್ಟಮೊದಲ ಬಾರಿಗೆ ಕೆಲಸ ಮಾಡಿದವಳು ನಾನು ಮತ್ತು ನನ್ನ ಸಂಘಟನೆಯಾಗಿದೆ.
ನೊಂದ ಮಹಿಳೆಯರ ಧ್ವನಿಯಾಗಿ ನಾನು ನಿಮ್ಮ ಪರ ಇದ್ದೇನೆ ಎಂದರು. ತಾಪಂ ಅಧ್ಯಕ್ಷೆ ರಾಧಾ ಅರ್ಜುನ ಶಿಂಗನಹಳ್ಳಿ, ಪಪಂ ಅಧ್ಯಕ್ಷೆ ರೇಣುಕಾ ರವಿ ಹಾವೇರಿ, ಲೊಯೋಲ ವಿಕಾಸ ಕೇಂದ್ರ ಹಾನಗಲ್ ನಿರ್ದೇಶಕ ಸಂತೋಷ ವಿಲ್ಸನ್ ಎಸ್.ಜೆ., ಜ್ಯೋತಿ ಕಾನ್ವೆಂಟ್ ಮುಖ್ಯಸ್ಥೆ ಗ್ರೇಟ್ಟಾ ಮೊಂಥೆರೊ, ಲೀನಾ ಡಿಕೊಸ್ಟ್, ಲಕ್ಷ್ಮಣ ಮುಳೆ, ಮಹಾಲಕ್ಷ್ಮಿ ನಿಂಬಾಯಿ ಮತ್ತು ಎಲ್ಲ ಮಹಿಳಾ ಸ್ವ ಸಹಾಯ ಸಂಘದ ಪ್ರತಿನಿಧಿಗಳು ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಭಾಗವಹಿಸಿದ್ದರು. ಅನ್ನು ಸಿದ್ದಿ ನಿರೂಪಿಸಿದರು. ಮಹಾಲಕ್ಷ್ಮಿ ನಾಯ್ಕ ಸ್ವಾಗತಿಸಿದರು.