Advertisement

ಕೊಳಚೆ ಪ್ರದೇಶದಲ್ಲಿ ಶುದ್ಧ ಕುಡಿವ ನೀರು ಪೂರೈಸಿ

04:32 PM May 13, 2019 | Team Udayavani |

ತುಮಕೂರು: ನಗರದ 35 ವಾರ್ಡ್‌ಗಳಲ್ಲಿ ಬರುವ ಕೊಳಚೆ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿ ನಗರ ಪಾಲಿಕೆಯಿಂದಲೇ ಅವುಗಳನ್ನು ನಿರ್ವಹಿಸಬೇಕೆಂದು ಜಿಲ್ಲಾ ಕೊಳಗೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಒತ್ತಾಯಿಸಿದರು.

Advertisement

ನಗರದಲ್ಲಿ ನಡೆದ ಜಿಲ್ಲಾ ಕೊಳಗೇರಿ ಹಿತರಕ್ಷಣಾ ಸಮಿತಿ ಕಾರ್ಯಕಾರಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶುದ್ಧ ಕುಡಿವ ನೀರು ನೀಡಿ: ಕೊಳಗೇರಿಗಳ ಪ್ರಸ್ತುತ ಸಮಸ್ಯೆಗಳು, ಮುಂದಿನ ಹೋರಾಟದ ರೂಪುರೇಷಗಳ ಕುರಿತು ವಿವರಿಸಿದ ಅವರು, ಕೊಳಗೇರಿಯಲ್ಲಿ ವಾಸಿಸುವ ಜನರಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಮಹಾನಗರ ಪಾಲಿಕೆ ಮುಂದಾಗಬೇಕು. ಆಯುಕ್ತರು ಇದಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದರು.

ಜನೋಪಯೋಗಿ ಕೆಲಸಕ್ಕೆ ಬೆಂಬಲ: ನಗರದ ವಿವಿಧ ಕಡೆ ಇದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆ ಆಯುಕ್ತರು ಪಾಲಿಕೆ ಸುಪರ್ದಿಗೆ ಪಡೆದುಕೊಂಡು ನಿರ್ವಹಣೆಯನ್ನು ಪಾಲಿಕೆಯೇ ವಹಿಸಿಕೊಂಡಿರುವುದು ಅಭಿನಂದನೀಯ. ಆಯುಕ್ತರ ಇಂತಹ ಜನೋಪಯೋಗಿ ಕೆಲಸಗಳಿಗೆ ಜನರ ಸಹಕಾರ ಇರುತ್ತದೆ ಎಂದು ಹೇಳಿದರು.

ದಿಬ್ಬೂರಿನಲ್ಲಿ ರಾಜೀವ್‌ ಆವಾಸ್‌ ಯೋಜನೆಯಡಿ ನಿರ್ಮಿಸಿ ಹಂಚಿಕೆ ಮಾಡಿರುವ 1,200 ಮನೆಗಳಿಗೆ ಜಿಲ್ಲಾಧಿಕಾರಿಗಳು ಶೀಘ್ರವೇ ಹಕ್ಕು ಪತ್ರವನ್ನು ವಿತರಿಸಿ, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

Advertisement

ಕೊಳಚೆ ಪ್ರದೇಶ ಘೋಷಿಸಿ: ರಾಜೀವ್‌ ಆವಾಸ್‌ ಯೋಜನೆಯಡಿ ಹಕ್ಕುಪತ್ರವಿಲ್ಲದ ಕೊಳಗೇರಿಗಳಿಗೆ ಶೀಘ್ರವಾಗಿ ಮಹಾನಗರ ಪಾಲಿಕೆ ಮತ್ತು ಆಶ್ರಯ ಸಮಿತಿಯಿಂದ ಹಕ್ಕುಪತ್ರ ವಿತರಿಸಬೇಕು. ಅಘೋಷಿತ ಕೊಳಚೆ ಪ್ರದೇಶಗಳಾದ ಎಸ್‌.ಎನ್‌.ಪಾಳ್ಯ, ಸಂಪಾದನೆ ಮಠ ಮತ್ತು ಭಾರತೀ ನಗರ-2 ಕೊಳಚೆ ಪ್ರದೇಶಗಳನ್ನು ಶೀಘ್ರವಾಗಿ ಘೋಷಿಸಬೇಕು. ಇಸ್ಮಾಯಿಲ್ ನಗರ ಹಂದಿಜೋಗಿ ಕೊಳಚೆ ಪ್ರದೇಶದಲ್ಲಿ ಕೆಲವೊಂದು ಕಿಡಿಗೇಡಿಗಳು ಅಮಾಯಕರ ಮೇಲೆ ಪೊಲೀಸ್‌ ಕೇಸು ದಾಖಲಿಸುತ್ತಿರುವುದರ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ರಕ್ಷಣೆ ಪಡೆಯಬೇಕು ಎಂದು ತಿಳಿಸಿದರು.

ಅಭಿನಂದನೆ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಾರಿಯಮ್ಮ ನಗರದಲ್ಲಿ ವಸತಿ ಸಂಕೀರ್ಣ ನಿರ್ಮಿಸಲು ಕಾರಣರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ಕೆ.ಪಿ.ಮೋಹನ್‌ರಾಜ್‌, ನಗರ ಶಾಸಕ‌ ಜಿ.ಬಿ.ಜ್ಯೋತಿ ಗಣೇಶ್‌, ಮಾಜಿ ಶಾಸಕ ಡಾ.ಎಸ್‌.ರಫೀಕ್‌ ಅಹಮ್ಮದ್‌, ತುಮಕೂರು ಮಹಾನಗರ ಪಾಲಿಕೆ ಮಹಾಪೌರರು, ಉಪಮಹಾಪೌರರು, ಪಾಲಿಕೆಯ ಎಲ್ಲಾ ಸದಸ್ಯರಿಗೆ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಂ.ಪಿ.ಮಹೇಶ್‌ ಅವರಿಗೆ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಜಿಲ್ಲಾ ಕೊಳಗೇರಿ ಸಮಿತಿ ಪದಾಧಿಕಾರಿಗಳಾದ ದೀಪಿಕಾ, ಶೆಟ್ಟಾಳಯ್ಯ, ಕಣ್ಣನ್‌, ಕೃಷ್ಣ, ಜಾಬೀರ್‌, ಶಾರದಮ್ಮ, ಗಂಗಮ್ಮ, ರಂಗನಾಥ್‌, ಸರ್ವರ್‌, ಭೂಮಿಪಾಲನ್‌, ಎಂ.ಶಂಕರಪ್ಪ ನಾಗಮ್ಮ, ಮೊಹಮ್ಮದ್‌ ಹಯಾತ್‌ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next