Advertisement

8-10 ದಿನಕ್ಕಾದರೂ ಶುದ್ಧ ಕುಡಿಯುವ ನೀರು ಪೂರೈಸಿ

07:57 AM May 22, 2019 | Team Udayavani |

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ ನಗರಕ್ಕೆ ಕನಿಷ್ಠ 8 ಅಥವಾ 10 ದಿನಕ್ಕೊಮ್ಮೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಯುವಸೇನಾ ಸೋಷಿಯಲ್ ಆ್ಯಕ್ಷನ್‌ ಕ್ಲಬ್‌ ವತಿಯಿಂದ ಈಚೆಗೆ ಪಾಲಿಕೆ ಆಯುಕ್ತೆ ತುಷಾರಮಣಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಬಳ್ಳಾರಿ ಮಹಾನಗರವು ದಿನೇ ದಿನೇ ವಿಸ್ತಾರಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಜನಸಂಖ್ಯೆಯೂ ಬೆಳೆಯುತ್ತಿದ್ದು, ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಮೋಕಾ, ಅಲ್ಲೀಪುರ ಕೆರೆಗಳಲ್ಲಿ ಕಳೆದ ಒಂದು ದಶಕದಲ್ಲಿ ಅತ್ಯಂತ ಕಡಿಮೆ ನೀರು ಸಂಗ್ರಹಿಸಲಾಗಿದೆ. ಅಲ್ಲೀಪುರ ಕೆರೆಯಲ್ಲಿ ಬೇಸಿಗೆಯಲ್ಲಿ ಸಂಗ್ರಹಿಸಬೇಕಿದ್ದ ನಿಗದಿತ ಪ್ರಮಾಣಕ್ಕಿಂತ ಕನಿಷ್ಠ 3.5 ಮೀಟರ್‌ನಷ್ಟು ನೀರನ್ನು ಸಂಗ್ರಹಿಸಿಲ್ಲ. ಜಲಮಂಡಳಿ ಅಧಿಕಾರಿಗಳು ಕರೆಯಲ್ಲಿ 5 ಮೀಟರ್‌ನಷ್ಟು ಸುಮಾರು 8500 ದಶಲಕ್ಷ ಲೀಟರ್‌ಗಳಷ್ಟು ನೀರು ಸಂಗ್ರಹ ಮಾಡಿದ್ದಾರೆ. ಈ ನೀರನ್ನು ಮುಂದಿನ ಜುಲೈ 15 (ಮಳೆಗಾಲ ಆರಂಭವಾಗುವವರೆಗೆ) ಕನಿಷ್ಠ 10 ದಿನಕ್ಕೊಮ್ಮೆ ಪೂರೈಕೆ ಮಾಡಬಹುದು. ಆದರೆ, ಪಾಲಿಕೆ ಅಧಿಕಾರಿಗಳು ಕೆರೆಗಳಲ್ಲಿ ನೀರು ಇದ್ದರೂ ಸಹ ಅವೈಜ್ಞಾನಿಕ ವಿತರಣಾ ಪದ್ಧತಿಯಿಂದಾಗಿ 10 ದಿನಕ್ಕೊಮ್ಮೆ ಪೂರೈಸಬೇಕಿದ್ದ ಕುಡಿಯುವ ನೀರನ್ನು 15 ದಿನಕ್ಕೊಮ್ಮೆ ಸರಬರಾಜು ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಕ್ಲಬ್‌ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಮನವಿಯಲ್ಲಿ ಆರೋಪಿಸಿದ್ದಾರೆ.

ಪಾಲಿಕೆ ವತಿಯಿಂದ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡುವುದರಿಂದ ನಗರದ ಕಮೇಲಾ ಸೇರಿ ಬಡಜನರು ವಾಸಿಸುವ ಪ್ರದೇಶಗಳಲ್ಲಿ ಬಾಡಿಗೆಗೆ ಡ್ರಮ್‌ಗಳನ್ನು ತಂದು ನೀರನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಈ ನೀರನ್ನು 15 ದಿನಗಳವರೆಗೆ ಸಂಗ್ರಹಿಸಿಕೊಳ್ಳುವುದರಿಂದ ದುರ್ವಾಸನೆ ಬರುವುದರ ಜತೆಗೆ ಹುಳುಗಳು ಉತ್ಪತ್ತಿಯಾಗಿ ನಾನಾ ರೋಗಗಳು ಹರಡಲು ಕಾರಣವಾಗುತ್ತದೆ. ಇದರಿಂದ ಬಡಜನರು ದುಡಿದ ಹಣವನ್ನೆಲ್ಲಾ ಆರೋಗ್ಯಕ್ಕಾಗಿಯೇ ಖರ್ಚು ಮಾಡಬೇಕಾಗಿದೆ. ಆದ್ದರಿಂದ ಈ ಪದ್ಧತಿಯನ್ನು ಕೈ ಬಿಟ್ಟು, 8 ರಿಂದ 10 ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಬೇಕು ಎಂದವರು ಕೋರಿದ್ದಾರೆ. ಇಲ್ಲದಿದ್ದಲ್ಲಿ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದವರು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಕ್ಲಬ್‌ನ ಎಸ್‌.ಕೃಷ್ಣಾ, ಜಿ.ಎಂ.ಬಾಷಾ, ಸಲಾವುದ್ದೀನ್‌, ಕೆ.ದುರುಗಪ್ಪ, ರಾಮಕೃಷ್ಣ, ಶಿವಾನಂದ, ಎಂ.ಕೆ.ಜಗನ್ನಾಥ, ಬಿ.ನರಸಿಂಹಬಾಬು, ಶ್ರೀನಿವಾಸ, ಕೆ.ವೆಂಕಟೇಶ್‌, ಶ್ರೀಧರ್‌, ಎಂ.ಎರ್ರಿಸ್ವಾಮಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next