ಪಾವಗಡ: ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳಿಗೆ ಬಸ್‌ಪಾಸ್ ನೀಡಿ ತಿಂಗಳು ಕಳೆದರೂ ಸರ್ಕಾರ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ಶಾಲಾ-ಕಾಲೇಜಿಗೆ ಸಮಯಕ್ಕೆ ತೆರಳಲು ಆಗುತಿಲ್ಲ. ಖಾಸಗಿ ವಾಹನಕ್ಕೆ ಪ್ರತಿದಿನ ದುಡ್ಡು ಕೊಟ್ಟು ಹೋಗಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಜನರ ಕುರಿತು ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಶಿಕ್ಷಣ ಪಡೆಯಲು ಬರುತ್ತಾರೆ. ಶೀಘ್ರವೇ ಬಸ್ ವ್ಯವಸ್ಥೆ ಕಲ್ಪಿಸಿ ಸಮಸ್ಯೆ ಬಗೆಹರಿಸಬೇಕು.
ಪಾವಗಡದ ಅರಸೀಕೆರೆ ಮಾರ್ಗವಾಗಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಬೇಕೆಂದು ಎಂದು ಡಿಪೋ ವ್ಯವಸ್ಥಾಪಕ ಹನುಮಂತರಾಜುಗೆ ಮನವಿ ಪತ್ರ ಸಲ್ಲಿಸಿದರು. ಬಸ್ ಸೌಲಭ್ಯ ಕಲ್ಪಿಸು ವವರೆಗೆ ಪ್ರತಿಭಟನೆ ಮುಂದುವರಿಸು ತ್ತೇವೆ ಎಂದು ಪಟ್ಟು ಹಿಡಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವಿದ್ಯಾರ್ಥಿ ಗಳ ಪ್ರತಿಭಟನೆಗೆ ಸಾರ್ವಜನಿಕರೂ ಬೆಂಬಲ ಸೂಚಿಸಿದರು.
ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ವ್ಯವಸ್ಥಾಪಕರಿಗೆ ಸೂಚಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿಪೋ ವ್ಯವಸ್ಥಾಪಕ ಹನುಮಂತರಾಜು ಮಾತನಾಡಿ, ಸರ್ಕಾರದ ಗಮನಕ್ಕೆ ತಂದು ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.