Advertisement

ಸಾಧಿಕ್‌ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸಿ

09:50 AM Jan 30, 2019 | Team Udayavani |

ಚಿತ್ರದುರ್ಗ: ಇಲ್ಲಿನ ಸಾಧಿಕ್‌ ನಗರದ ಎಲ್ಲ ನಿವಾಸಿಗಳಿಗೆ ಕೂಡಲೇ ವಿದ್ಯುತ್‌ ಸಂಪರ್ಕ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು.

Advertisement

ಸಾಧಿಕ್‌ ನಗರಕ್ಕೆ ಮಂಗಳವಾರ ಭೇಟಿ ನೀಡಿ ನಿವಾಸಿಗಳ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು. ಹತ್ತಾರು ವರ್ಷಗಳಿಂದ ನಿವಾಸಿಗಳು ವಿದ್ಯುತ್‌ ಇಲ್ಲದೆ ಕತ್ತಲಲ್ಲಿ ಬದುಕಲು ಹೇಗೆ ಸಾಧ್ಯ, ಗುಡ್ಡ, ಬೆಟ್ಟದ ಸಮೀಪ ರಾಜೀವ್‌ ಗಾಂಧಿ ವಸತಿ ಯೋಜನೆ ಅಡಿ ಮನೆಗಳನ್ನು ನಿರ್ಮಿಸಿ ಸರ್ಕಾರವೇ ನೀಡಿದೆ. ಆದರೆ ವಿದ್ಯುತ್‌, ಕುಡಿಯುವ ನೀರು, ಚರಂಡಿಯ ಮೂಲ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಹೇಗೆಂದು ಪ್ರಶ್ನಿಸಿದರು. ಸಮಸ್ಯೆ ನಿವಾರಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕಂದಾಯ ಇಲಾಖೆ, ಬೆಸ್ಕಾಂ, ನಗರಸಭೆ ಅಧಿಕಾರಿಗಳು ಕಾನೂನಿನ ತೊಡಕು ನಿವಾರಿಸಿಕೊಂಡು ಸಾಧಿಕ್‌ ನಗರದ ವಿವಿಧ ಬೀದಿಗಳಿಗೆ ವಿದ್ಯುತ್‌ ಕಂಬ ಹಾಕಿ ಒಂದು ವಾರದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿ, ಈ ಬಡಾವಣೆಗೆ ವಿದ್ಯುತ್‌ ಏಕೆ ನೀಡಲಾಗಿಲ್ಲ ಎನ್ನುವ ಸಮಸ್ಯೆ ಅರಿತು ಇನ್ನೊಂದು ವಾರದಲ್ಲಿ ತಾಂತ್ರಿಕ ತೊಂದರೆ ಏನು ಎಂಬುದನ್ನು ತಿಳಿಸಲಾಗುತ್ತದೆ. ನಿರ್ದಿಷ್ಟ ಸಮಸ್ಯೆ ತಿಳಿದ ಮೇಲೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಕಂದಾಯ, ಬೆಸ್ಕಾಂ, ನಗರಾಭಿವೃದ್ಧಿ ಇಲಾಖೆ, ನಗರಸಭೆ ಅಧಿಕಾರಿಗಳು ಜ. 30 ರಂದು ಒಟ್ಟಿಗೆ ಸಭೆ ನಡೆಸಬೇಕು. ಸಮಸ್ಯೆ ಏನೆಂದು ಅರಿತು ವರದಿ ನೀಡಬೇಕು ಎಂದು ಸೂಚಿಸಿದರು.

Advertisement

ಅನರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳು ಮಂಜೂರಾಗಿದ್ದು ಅವರೆಲ್ಲ ಬಡವರಿಗೆ ಬಾಡಿಗೆ ನೀಡಿ ಹೋಗಿದ್ದಾರೆ ಎನ್ನುವ ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಪರಿಶೀಲನೆ ನಡೆಸಿ ಯಾವ ಮನೆಯಲ್ಲಿ ಅನರ್ಹರು ವಾಸವಾಗಿದ್ದಾರೆ, ಯಾರಿಗೆ ಮಂಜೂರಾಗಿತ್ತು, ಮಂಜೂರುದಾರರು ಏಕೆ ವಾಸಿಸುತ್ತಿಲ್ಲ ಇತ್ಯಾದಿ ಮಾಹಿತಿಗಳುಳ್ಳ ವರದಿಯನ್ನು ತುರ್ತಾಗಿ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.

ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ್‌ ಮಾತನಾಡಿ, ಸಾಧಿಕ್‌ ನಗರದ ಸಮಗ್ರ ನಕ್ಷೆ, ಸರ್ಕಾರದಿಂದ ಭೂ ಪರಿವರ್ತನೆಯಾದ ದಾಖಲೆ, ಯಾವ್ಯಾವ ಮನೆ, ಬೀದಿಗಳಿಗೆ ವಿದ್ಯುತ್‌ ಕಂಬ ಹಾಕಿ ಲೈನ್‌ ಎಳೆಯಬೇಕು ಎನ್ನುವ ಪ್ರತ್ಯೇಕ ನಕ್ಷೆ ನೀಡಿದರೆ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ನೀಡಲಾಗುತ್ತದೆ. ಕನಿಷ್ಠ 10 ಲಕ್ಷ ರೂ. ವೆಚ್ಚ ಆಗುವ ಸಾಧ್ಯತೆ ಇದ್ದು ಇದರಲ್ಲಿ ಶೇ.10 ರಷ್ಟು ನಿರ್ವಹಣಾ ವೆಚ್ಚವನ್ನು ಬೆಸ್ಕಾಂಗೆ ತುಂಬಬೇಕು. ವಿದ್ಯುತ್‌ ಕಂಬ, ವೈರ್‌ ಖರೀದಿ ಮಾಡಿ ಕೊಟ್ಟರೆ ಒಂದು ವಾರದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.

ನಗರಸಭೆ ಸಹಾಯಕ ಇಂಜಿನಿಯರ್‌ ರಂಗನಾಥ್‌ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ವತಿಯಿಂದ 2004ರಲ್ಲೇ ಅನುಮೋದನೆ ಪಡೆಯಲಾಗಿದೆ. ಮತ್ತೆ ಪ್ರತ್ಯೇಕ ನಕ್ಷೆ ಕೇಳಿದರೆ ಕೊಡಲು ಬರುವುದಿಲ್ಲ. ಇರುವ ನಕ್ಷೆಗೆ ಇಂತಿಷ್ಟು ಭಾಗದಲ್ಲಿ ವಿದ್ಯುತ್‌ ಲೈನ್‌ ಎಳೆದಿಲ್ಲ, ಇದಕ್ಕೆ ಎಸ್ಟಿಮೇಟ್ ಮಾಡಿಕೊಟ್ಟರೆ ನಿರ್ವಹಣಾ ವೆಚ್ಚ ಕಟ್ಟಿ ವಿದ್ಯುತ್‌ ಲೈನ್‌ ಎಳೆಸಬಹುದು ಎಂದು ಹೇಳಿದರು.

ಉಪವಿಭಾಗಾಧಿಕಾರಿ ವಿಜಯ್‌ಕುಮಾರ್‌ ಮಾತನಾಡಿ, ಸರ್ಕಾರಿ ಬಡಾವಣೆಗಳಿಗೆ ಅಥವಾ ಸರ್ಕಾರದ ಜಮೀನುಗಳನ್ನು ಭೂ ಪರಿವರ್ತನೆ ಮಾಡಿಕೊಡುವ ಅಗತ್ಯವಿಲ್ಲ. ಬೆಸ್ಕಾಂ ಅಧಿಕಾರಿಗಳು ಭೂ ಪರಿವರ್ತನೆ ದಾಖಲೆ ಕೇಳಿದರೆ ಹೇಗೆ ಕೊಡಲು ಸಾಧ್ಯ, ಇರುವ ದಾಖಲೆಗಳನ್ನೇ ಪಡೆದು ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದರು.

ದೂರುಗಳ ಸುರಿಮಳೆ
ಗುಡ್ಡ, ಬೆಟ್ಟದ ಸಮೀಪ ಇದ್ದು ಹತ್ತಾರು ವರ್ಷಗಳಿಂದ ಕತ್ತಲಲ್ಲಿ ಬದುಕುತ್ತಿದ್ದೇವೆ. ಬಹುತೇಕ ಮನೆಗಳು ಕಳಪೆಯಾಗಿವೆ. ಅನರ್ಹರಿಗೆ ಮನೆ ಮಂಜೂರು ಮಾಡಲಾಗಿದ್ದು, ಅವರೆಲ್ಲ ಬಾಡಿಗೆಗೆ ನೀಡಿ ಹೋಗಿದ್ದಾರೆ. ಬಡವರು ವಾಸಿಸುತ್ತಿದ್ದು ಅವರನ್ನೇ ಫಲಾನುಭವಿಗಳು ಎಂದು ತೀರ್ಮಾನ ಮಾಡಬೇಕು. ಕುಡಿಯುವ ನೀರು, ಚರಂಡಿ, ಬೀದಿದೀಪದ ವ್ಯವಸ್ಥೆ ಮಾಡಬೇಕು ಎಂದು ಸಂಸದರು, ಜಿಲ್ಲಾಧಿಕಾರಿಗಳ ಬಳಿ ಸಾಧಿಕ್‌ ನಗರದ ನಿವಾಸಿಗಳು ದೂರುಗಳ ಸುರಿಮಳೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next