ಹೊಸದಿಲ್ಲಿ: ಹಿರಿಯ ನಾಗರಿಕರು ಹಾಗೂ ಪಿಂಚಣಿದಾರರ ಮೊಗದಲ್ಲಿ ಮಂದಹಾಸ ತರುವಂಥ ಕೆಲವು ನಿರ್ಧಾರಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೈಗೊಂಡಿದ್ದು, ಎಪ್ಪತ್ತು ವರ್ಷ ದಾಟಿದ ಹಿರಿಯ ನಾಗರಿಕರಿಗೆ ಕೆಲವು ಅತ್ಯಗತ್ಯ ಬ್ಯಾಂಕಿಂಗ್ ಸೌಲಭ್ಯವನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಎಲ್ಲ ಬ್ಯಾಂಕ್‌ಗಳಿಗೆ ಆರ್‌ಬಿಐ ಆದೇಶಿಸಿದೆ.
ಇದರ ಜತೆಗೆ, ಹಿರಿಯ ನಾಗರಿಕರಿಗೆ ಚೆಕ್ ಬುಕ್ ನೀಡುವ ನಿಯಮಗಳಲ್ಲಿ ಬದಲಾವಣೆ, ಲೈಫ್ ಸರ್ಟಿಫಿಕೇಟ್‌ಗೆ ಸಹಿ ಹಾಕುವಲ್ಲಿ ಮತ್ತಷ್ಟು ಉಪಯೋಗ ಕಲ್ಪಿಸಿ, ಈವರೆಗಿನ ಸಾಂಪ್ರದಾಯಿಕ ಪದ್ಧತಿಗಳಲ್ಲಿ ತಿದ್ದುಪಡಿ ತರಲಾಗಿದೆ. ಡಿ. 31ರಿಂದ ಈ ಆದೇಶ ಅಧಿಕೃತವಾಗಿ ಜಾರಿಗೆ ಬರಲಿದ್ದು, ಜನವರಿಯಿಂದ ಎಲ್ಲರಿಗೂ ಈ ಸೇವೆ ಲಭ್ಯವಾಗಲಿದೆ.
ಮನೆ ಬಾಗಿಲಿಗೆ ಸೇವೆಗಳು: ಹಿರಿಯ ನಾಗರಿಕರು ಬಯಸಿದಲ್ಲಿ ಪಿಂಚಣಿ ಅಥವಾ ಅವರ ಇತರ ಖಾತೆಗಳ ಹಣ, ಚೆಕ್ ಬುಕ್, ಡಿಮ್ಯಾಂಡ್ ಡ್ರಾಫ್ಟ್, ನೋ ಯುವರ್ ಕಸ್ಟಮರ್ (ಕೆವೈಸಿ) ಅರ್ಜಿಗಳನ್ನು ಮನೆಗೇ ತಲುಪಿಸುವಂತೆ ಆದೇಶಿಸಲಾಗಿದೆ. ಇದರಿಂದ ಪಿಂಚಣಿಗಾಗಿ ಬ್ಯಾಂಕ್, ಎಟಿಎಂಗಳಲ್ಲಿ ಕ್ಯೂ ನಿಲ್ಲುವುದು ತಪ್ಪಲಿದೆ.
ಇದಲ್ಲದೆ, ವರ್ಷಕ್ಕೆ 25 ಚೆಕ್‌ಲೀಫ್ಗಳುಳ್ಳ ಚೆಕ್ ಬುಕ್‌ಗಳನ್ನು ನೀಡು ವಂತೆ ಸೂಚಿಸಲಾಗಿದೆ. ಇಷ್ಟೇ ಅಲ್ಲದೆ, ಬ್ಯಾಂಕ್‌ಗಳಿಗೆ ತೆರಳಲೇಬೇಕಾದ ಹಿರಿಯ ನಾಗರಿಕರಿಗೆ ಬ್ಯಾಂಕ್‌ಗಳ ವತಿಯಿಂದಲೇ ಪಿಕ್-ಅಪ್ ಸೌಲಭ್ಯ ನೀಡಬೇಕೆಂದು ಆರ್‌ಬಿಐ ತಿಳಿಸಿದೆ.
ಇದೇ ವೇಳೆ, ಹಿರಿಯ ನಾಗರಿಕರಿಗೆ ಚೆಕ್ ಬುಕ್ ವಿತರಿಸುವಾಗ ಅವರ ಉಪಸ್ಥಿತಿ ಇರಲೇಬೇಕೆಂಬ ನಿಯಮವನ್ನು ತೆಗೆದುಹಾಕಿದೆ.
ಪಿಂಚಣಿದಾರರು ಪ್ರತಿ ವರ್ಷ ನವೆಂಬರ್‌ನಲ್ಲಿ ತಮ್ಮ ಪಿಂಚಣಿ ಖಾತೆ ಇರುವ ಬ್ಯಾಂಕ್ ಶಾಖೆಗಳಿಗೆ ಹೋಗಿ ಲೈಫ್ ಸರ್ಟಿಫಿಕೇಟ್‌ಗೆ ಸಹಿ ಮಾಡುವ ಪದ್ಧತಿಗೆ ಇತಿಶ್ರೀ ಹಾಡಿರುವ ಆರ್‌ಬಿಐ, ಪಿಂಚಣಿ ನೀಡುವ ಯಾವುದೇ ಬ್ಯಾಂಕ್ ಶಾಖೆಗೆ ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ನೀಡಿ ಲೈಫ್ ಸರ್ಟಿಫಿಕೇಟ್‌ಗೆ ಸಹಿ ಹಾಕಬಹುದೆಂದು ಹೇಳಿದೆ.