Advertisement

ವಿಕಲಚೇತನರಿಗೆ ಬ್ಯಾಕ್‌ಲಾಗ್‌ ಸೌಲತ್ತು ಒದಗಿಸಿ

10:07 AM Feb 18, 2019 | Team Udayavani |

ಯಾದಗಿರಿ: ವಿಕಲಚೇತನರ ಗಣತಿ ಆಗಬೇಕು. ವಿಕಲಚೇತನರಿಗೆ ಬ್ಯಾಕ್‌ ಲಾಗ್‌ ಹುದ್ದೆಗಳನ್ನು ತುಂಬುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ವಿಕಲಚೇತನ ನೌಕರರ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ಉಪಕಾರ್ಯದರ್ಶಿ ಆರ್‌. ಇಂದ್ರೇಶ ಆಗ್ರಹಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಥಮ ಜಿಲ್ಲಾ ಸಮ್ಮೇಳನ ಹಾಗೂ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ವಿಕಲಚೇತನರ ಗಣತಿ ಪ್ರತ್ಯೇಕವಾಗಿ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. 

ನೇಮಕಾತಿಯಲ್ಲಿ ವಿಕಲಚೇತನರ ಮೀಸಲಾತಿಯನ್ನು ಶೇ. 3ರಿಂದ 4ಕ್ಕೆ ಏರಿಕೆ ಮಾಡಲು ಈಗಾಗಲೇ 2017ರಲ್ಲಿಯೇ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದನ್ನು ತ್ವರಿತ ಜಾರಿಗೊಳಿಸಬೇಕು ಮತ್ತು ವಿಕಲಚೇತನ ನೌಕರರಿಗೆ ಮೀಸಲಿರುವ ಹುದ್ದೆಗಳನ್ನು ಬ್ಯಾಕ್‌ ಲಾಗ್‌ ಮೂಲಕವೇ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ವಿಕಲಚೇತನರು ಕಚೇರಿಗೆ ಬರಲು ಸಾಮಾನ್ಯ ಚೇತನರಿಗಿಂತ ಹೆಚ್ಚಿನ ಸಂಕಷ್ಟ ಎದುರಿಸುತ್ತಾರೆ. ಹೀಗಾಗಿ ಅವರಿಗೆ ಕಚೇರಿಗೆ ಆಗಮಿಸುವ ಸಮಯದಲ್ಲಿ ವಿನಾಯಿತಿ ನೀಡಿ ಕಚೇರಿ ಮುಕ್ತಾಯ ಸಮಯದಲ್ಲಿ ವಿಳಂಬವಾಗಿ ಬಂದ ಅವಧಿಯನ್ನು ಪೂರೈಸಲು ಅವಕಾಶ ಮಾಡಿಕೊಡಬೇಕೆಂದರು. ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ವಿಕಲಚೇತನ ನೌಕರರರಿಗೆ ಇರುವ ಸೌಲತ್ತುಗಳನ್ನು ಪಡೆಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿವೆ.

ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಮತ್ತು ಅವನ್ನು ಪ್ರಚುರ ಪಡಿಸಲು ಏರ್ಪಡಿಸಿರುವ ಕಾರ್ಯಕ್ರಮ ಮೌಲಿಕವಾಗಿದೆ ಎಂದು ಹೇಳಿದರು. ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಎಸ್‌. ರೇಣುಕಾರಾಧ್ಯ ಮಾತನಾಡಿ, ವಿಕಲಚೇತನ ನೌಕರರಿಗೆ ಬಡ್ತಿ ಮೀಸಲಾತಿ ಕಲ್ಪಿಸಬೇಕು. ವಿಕಲಚೇತನ ನೌಕರರ ಹಿತ ಕಾಪಾಡಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಪ್ರತಿಪಾದಿಸಿದರು.

Advertisement

ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕೋತ್ವಾಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೌರಾಯುಕ್ತ ಸಂಗಪ್ಪ ಉಪಾಸೆ, ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ ವೇದಿಕೆ ಮೇಲೆ ಇದ್ದರು. ವಿಶೇಷ ಆಹ್ವಾನಿತರಾಗಿ ವಿಕಲಚೇತನರ
ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷ ಡಾ| ವಸಂತ ಕುಷ್ಟಗಿ, ಉಪಾಧ್ಯಾಕ್ಷ ಶಾಂತಪ್ಪ ಸಂಗಾವಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಶಶಿಕಾಂತ ಕಶೆಟ್ಟಿ, ದಿಲಿಪಸಿಂಗ್‌ ಇದ್ದರು. ಸಿದ್ದಪ್ಪ ಕಲಶೆಟ್ಟಿ ಪ್ರಾರ್ಥಿಸಿದರು. ಸಿದ್ದಯ್ಯ ಮಠ ಸ್ವಾಗತಿಸಿದರು. ಉಪನ್ಯಾಸಕ ಮನೋಹರ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next