ತುಮಕೂರು: ಕೋವಿಡ್ ಪರೀಕ್ಷೆ ಹೆಸರಲ್ಲಿ ಬೇರೆಡೆಗೆ ಸೋಂಕಿತರನ್ನು ಕಳುಹಿಸದೆ ನಿಮ್ಮ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಿಸಿಕೊಂಡು ಪರೀಕ್ಷೆ ನಡೆಸಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚಿಸಿದರು.
ನಗರದಲ್ಲಿ ಶನಿವಾರ ಖಾಸಗಿ ಆಸ್ಪತ್ರೆಗಳು ಒಗ್ಗೂಡಿ ಅಶ್ವಿನಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ ಆಸ್ಪತ್ರೆಯನ್ನು ವೀಕ್ಷಿಸಿದ ನಂತರ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯಲ್ಲಿ ಮಾತನಾಡಿದರು.
ಮೊದಲು ಚಿಕಿತ್ಸೆ: ಕೋವಿಡ್-19ನ್ನುರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವುದು ನಿಮ್ಮ ಕರ್ತವ್ಯವಾಗಿದೆ. ಆಸ್ಪತ್ರೆಗೆ ಬರುವವರನ್ನು ಚಿಕಿತ್ಸೆ ನೀಡದೆ ಕೋವಿಡ್ ಪರೀಕ್ಷೆಯ ವರದಿಯನ್ನು ಕೇಳಿ ವಾಪಸ್ ಕಳುಹಿಸಿದರೆ ಹೇಗೆ? ತುರ್ತು ಸಂದರ್ಭ ದಲ್ಲಿ ಬರುವ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡಿ ಬಡವರ ಸೇವೆ ಮಾಡಿದರೆ ನಿಮ್ಮ ವೃತ್ತಿಗೆ ಗೌರವ ಬರುತ್ತದೆ ಎಂದರು.
2500ಕ್ಕೂ ಹೆಚ್ಚು ಹಾಸಿಗೆಗಳು ಲಭ್ಯ: ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆ ಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ಮೀಸಲಿಡಬೇಕು, ಅದರಂತೆ ಜಿಲ್ಲೆಯಲ್ಲಿ 80 ಖಾಸಗಿ ಆಸ್ಪತ್ರೆಗಳಿವೆ. ತುಮಕೂರು ನಗರದಲ್ಲಿಯೇ 39 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿ ಲಭ್ಯವಿರುವ ಹಾಸಿಗೆ ಹಾಗೂ ಐಸಿ ಯುಗಳ ಪೈಕಿ ಶೇ.50ರಷ್ಟು ಸರ್ಕಾರಕ್ಕೆ ದೊರೆಯಲಿವೆ. ಜಿಲ್ಲೆಯಲ್ಲಿ ಸುಮಾರು 2500ಕ್ಕೂ ಹೆಚ್ಚು ಹಾಸಿಗೆಗಳು ಖಾಸಗಿ ಆಸ್ಪತ್ರೆಗಳಿಂದ ಲಭ್ಯ ವಾಗಲಿವೆ ಎಂದು ತಿಳಿಸಿದರು.
ಅನುಮತಿ ನೀಡಲಾಗಿದೆ: ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ಮಾತನಾಡಿ, ಖಾಸಗಿ ಆಸ್ಪತ್ರೆಗಳ ಮನವಿಯಂತೆ ಕೆಲ ಆಸ್ಪತ್ರೆಗಳು ಒಗ್ಗೂಡಿ ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್ ಆಸ್ಪತ್ರೆಯನ್ನು ತೆರೆಯಲು ಅನು ಮತಿ ನೀಡಲಾಗಿದೆ. ಅದರಂತೆ ತುಮಕೂರು ನಗರದಲ್ಲಿ ಎರಡು ಕಡೆ ಕೋವಿಡ್ ಆಸ್ಪತ್ರೆ ಗಳನ್ನು ಖಾಸಗಿ ಆಸ್ಪತ್ರೆಗಳು ತೆರೆದಿವೆ ಎಂದರು.
ಶೇ.50 ಬೆಡ್ ಸರ್ಕಾರಕ್ಕೆ ಬಿಡಿ: ಸರ್ಕಾರದ ನಿರ್ದೇಶನದಂತೆ ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಬೆಡ್‌ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡ ಬೇಕು. ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್ ಲ್ಯಾಬ್‌ಗಳ ಸಂಖ್ಯೆ ಹೆಚ್ಚಳ ಮಾಡುತ್ತಿರುವುದರಿಂದ ಪರೀಕ್ಷೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಸಂಖ್ಯೆಯ ಅಂಕಿ ಅಂಶಗಳ ಬಗ್ಗೆ ಹಾಗೂ ಲಭ್ಯವಾಗುವ ಬೆಡ್‌ಗಳ ಬಗ್ಗೆ ಡಿಎಚ್‌ಒ ಡಾ. ನಾಗೇಂದ್ರಪ್ಪ ಸಭೆಗೆ ಮಾಹಿತಿ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ರೆಡ್ ಕ್ರಾಸ್ ಛೇರ್ಮೇನ್ ಎಸ್.ನಾಗಣ್ಣ, ಚರಕ ಆಸ್ಪತ್ರೆಯ ಡಾ. ಬಸವರಾಜ್, ಡಾ.ಪ್ರಭಾಕರ, ಡಾ. ಮಹೇಶ ಇದ್ದರು. ಲೆಕ್ಕ ಪರಿಶೋಧಕ ರಾಮಚಂದ್ರಪ್ಪ ಒಂದು ವೆಂಟಿಲೇಟರ್ ಖರೀದಿಸಲು 4.50 ಲಕ್ಷ ರೂ.ಗಳ ಚೆಕ್‌ನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.