Advertisement

ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ

10:10 AM Sep 10, 2019 | Suhan S |

ದಾವಣಗೆರೆ: ಭಾರೀ ಮಳೆ, ನೆರೆ, ಪ್ರವಾಹದಿಂದ ಅತೀವ ಸಂಕಷ್ಟಕ್ಕೀಡಾಗಿರುವ ಉತ್ತರ ಕರ್ನಾಟಕ ಹಾಗೂ ಇತರೆ ಜಿಲ್ಲೆಯಲ್ಲಿನ ಜನರಿಗೆ ಕೇಂದ್ರ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪೀಪಲ್ಸ್ ಲಾಯರ್ ಗಿಲ್ಡ್ ವತಿಯಿಂದ ವಕೀಲರು ಪ್ರತಿಭಟನೆ ನಡೆಸಿದರು.

Advertisement

ಕಳೆದ ಆಗಸ್ಟ್‌ ಮತ್ತು ಈಚೆಗೆ ಸುರಿದ ಭಾರೀ ಮಳೆಯಿಂದ ರಾಜ್ಯದ ಸುಮಾರು 21 ಜಿಲ್ಲೆಗಳಲ್ಲಿ ನೆರೆಯ ಪರಿಣಾಮ ಲಕ್ಷಾಂತರ ಜನರು ಬೀದಿ ಬಂದಿದ್ದಾರೆ. ಸಾವಿರಾರು ಕುಟುಂಬಗಳು ಮನೆ, ಬೆಳೆ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಅನಾಥರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿಲ್ಲ. ಕೇಂದ್ರ ಸರ್ಕಾರ ಈವರೆಗೆ ನಯಾ ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ಕೂಡಲೇ ಪರಿಹಾರ ಬಿಡುಗಡೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ನ್ಯಾಯವಾದಿಗಳು ಒತ್ತಾಯಿಸಿದರು.

ಹಿಂದೆಂದು ಕಂಡು ಕೇಳರಿಯದಂತಹ ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಲಕ್ಷಾಂತರ ಜನರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. ಹಿಂದೊಮ್ಮೆ ಅನೇಕ ಜನರಿಗೆ ನೆರವು ನೀಡಿರುವ ಜನರೇ ಈಗ ಅಂಗಲಾಚುವ ಪರಿಸ್ಥಿತಿಗೆ ತಲುಪುವಂತಾಗಿದ್ದಾರೆ. ಮನೆ ಕಳೆದುಕೊಂಡು ಬಯಲಿನಲ್ಲೇ ಮಳೆ, ಚಳಿ ಎನ್ನದೆ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುತ್ತಿದ್ದಾರೆ. ಸರ್ಕಾರದಿಂದ ದೊರೆತಂತಹ ಭರವಸೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ನಿಜವಾಗಿಯೂ ಸಂತ್ರಸ್ತರಿಗೆ ನೆರವು ನೀಡುವ ಕೆಲಸ ಸಮಾರೋಪಾದಿಯಲ್ಲಿ ಆಗಬೇಕು ಎಂದು ಒತ್ತಾಯಿಸಿದರು.

ನೆರೆ ಸಂಭವಿಸಿ ತಿಂಗಳು ಉರುಳಿದರೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ಬಂದಿಲ್ಲ. ಒಂದು ನಯಾ ಪೈಸೆಯನ್ನಾಗಲಿ ನೆರೆಪೀಡಿತರಿಗೆ ನೀಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲೂ ಕೂಡ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ರಾಜ್ಯದಿಂದ 25 ಜನ ಸಂಸದರನ್ನು ಆರಿಸಿ ಕಳುಹಿಸಿದರೂ ಕೂಡ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ 20 ಸಾವಿರ ಕೋಟಿ ಬೇಡಿಕೆಯಿಟ್ಟಿದ್ದರೂ ಅನಾವೃಷ್ಟಿ ಪರಿಹಾರ ಸೇರಿ 1,026 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ನೆರೆಗೆ ಸಂಬಂಧಿಸಿದಂತೆ ನೆರವು ನೀಡಿಲ್ಲ ಎಂದು ದೂರಿದರು.

Advertisement

ಕೇಂದ್ರ ಸರ್ಕಾರ ನಿಸ್ಸೀಮ ನಿರ್ಲಕ್ಷ್ಯ ತೋರುತ್ತಿದೆ. ಬಿಜೆಪಿಯ ಯಾವುದೇ ಸಂಸದರು ನೆರವು ತರುವ ಬಗ್ಗೆ ಮಾತನಾಡುತ್ತಿಲ್ಲ. ತಮಗೂ ರಾಜ್ಯದಲ್ಲಿನ ಸ್ಥಿತಿಗೂ ಯಾವುದೇ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆಯ ಜೊತೆಗೆ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಗಿಲ್ಡ್ನ ಅನೀಸ್‌ ಪಾಷಾ, ಎಲ್.ಎಚ್. ಅರುಣ್‌ಕುಮಾರ್‌, ಮಂಜುಳಾ ಹಲಗೇರಿ, ಉಷಾ ಕೈಲಾಸದ್‌, ರಾಮಚಂದ್ರ ಕಲಾಲ್, ಬಿ.ಟಿ. ವಿಶ್ವನಾಥ್‌, ಎನ್‌. ರಂಗಸ್ವಾಮಿ, ಎ.ಎಲ್. ಅಬ್ದುಲ್, ನಜೀರ್‌ ಅಹಮ್ಮದ್‌, ಸಿರಾಜುದ್ದೀನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next