Advertisement

ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ಸೌಲಭ್ಯ ಕಲ್ಪಿಸಿ

03:17 PM Jul 16, 2019 | Team Udayavani |

ಕುಮಟಾ: ತಾಲೂಕಿನ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ಬಸ್‌ಪಾಸ್‌ ಹೊಂದಿರುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ಸೌಲಭ್ಯ ಕಲ್ಪಿಸಿಕೊಡುವ ಕುರಿತು ಕೆಎಸ್‌ಆರ್‌ಟಿಸಿ ಕುಮಟಾ ಘಟಕದ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

Advertisement

ಚಿತ್ರಿಗಿ ಪ್ರೌಢಶಾಲೆಗೆ ಅಘನಾಶಿನಿ, ಬಾಡ ಬಸ್‌ನಿಂದ 70 ವಿದ್ಯಾರ್ಥಿಗಳು ಮತ್ತು ಲುಕ್ಕೇರಿ-ಮಾಸೂರು ಭಾಗದಿಂದ 57 ವಿದ್ಯಾರ್ಥಿಗಳು, ಒಟ್ಟೂ 127 ವಿದ್ಯಾರ್ಥಿಗಳು ಸರಕಾರಿ ರಿಯಾಯತಿ ದರದ ವಿದ್ಯಾರ್ಥಿ ಬಸ್‌ಪಾಸ್‌ ಪಡೆದಿದ್ದಾರೆ. ಪ್ರಸ್ತುತ ಸರಕಾರಿ ಕಾಲೇಜು ಬಿಡುವ ಸಮಯ ಹಾಗೂ ಶಾಲೆಯ ಬಿಡುವಿನ ಸಮಯವೂ ಒಂದೇ ಆಗಿರುವುದರಿಂದ ಬಸ್‌ ತುಂಬಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಸ್ಥಳದ ಅಭಾವ ಉಂಟಾಗಿದೆ. ಈ ಕಾರಣ ಹೆಣ್ಣುಮಕ್ಕಳನ್ನು ಮಾರ್ಗ ಮಧ್ಯೆ ಬಿಟ್ಟು ಹೋಗುತ್ತಿದ್ದಾರೆ. ಅಲ್ಲದೇ ಮಾಸೂರಿಗೆ ಹೋಗುವ ಬಸ್‌ ಸಮಯಕ್ಕೆ ಸರಿಯಾಗಿ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ದೊಡ್ಡ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಮುಖ್ಯಾಧ್ಯಾಪಕ ಎನ್‌.ಆರ್‌. ಗಜು ವಿದ್ಯಾರ್ಥಿ ಸಮುದಾಯದ ಪರವಾಗಿ ಡಿಪೋ ವ್ಯವಸ್ಥಾಪಕರ ಬಳಿ ಅಳಲು ತೋಡಿಕೊಂಡರು.

ಶಿವಾನಂದ ಕಾಮತ್‌ ಪಾಲಕರ ಪರವಾಗಿ ಮಾತನಾಡಿ, ಶಾಲೆಗೆ ಸಮೀಪವಾದ ಸಸ್ಯೋಧ್ಯಾನ ಬಸ್‌ ನಿಲ್ದಾಣದಲ್ಲಿಯೇ ಬಸ್‌ ಸ್ಟಾಪ್‌ ಕೊಡಬೇಕು. ಅಲ್ಲಿಂದಲೇ ಹತ್ತಿಸಿ, ಅಲ್ಲಿಯೇ ಇಳಿಸುವಂತೆ ನಿರ್ವಾಹಕರಿಗೆ ಸೂಚಿಸಬೇಕು ಎಂದ ಅವರು, ಕೆಲವು ಬಸ್‌ ನಿರ್ವಾಹಕರು, ವಿದ್ಯಾರ್ಥಿ ಪ್ರಯಾಣಿಕರೊಡನೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ವ್ಯವಸ್ಥಾಪಕರ ಗಮನಕ್ಕೆ ತಂದರು. ಡಿಪೋ ವ್ಯವಸ್ಥಾಪಕಿ ಸೌಮ್ಯಾ ನಾಯಕ ಮಾತನಾಡಿ, ಹೊನ್ನಾವರ ಮತ್ತು ಕುಮಟಾ ಎರಡೂ ಬಸ್‌ ಡಿಪೋ ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದ್ದು, ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದಕ್ಕನುಗುಣವಾಗಿ ಸಾಕಷ್ಟು ಸಂಖ್ಯೆಯಲ್ಲಿ ಬಸ್‌, ಕಂಡಕ್ಟರ್ ಮತ್ತು ಡ್ರೈವರ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಸಮಸ್ಯೆ ತಾಲೂಕಿನಾದ್ಯಂತ ತಲೆದೋರಿದೆ. ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಕಾಳಜಿ ತಮ್ಮ ಮೇಲಿದ್ದು, ಅದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಆ ಭಾಗದ ಕೊನೆಯ ಬಸ್‌ ಅದಾಗಿದ್ದರೆ ಯಾರನ್ನೂ ಬಿಟ್ಟು ಹೋಗದಂತೆ ಸೂಚಿಸುವುದಾಗಿ ತಿಳಿಸಿದರು.

ಎಟಿಎಸ್‌ ಶಿವಾನಂದ ನಾಯ್ಕ, ಶಿಕ್ಷಕ ಪ್ರದೀಪ ನಾಯಕ, ಕಿರಣ ಪ್ರಭು ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next