ಬೆಂಗಳೂರು: ಪೌರಕಾರ್ಮಿಕರ ಪ್ರತಿಭಟನೆ ಬೆನ್ನಲ್ಲೇ ನಿಯಮಾನುಸಾರ ಎಲ್ಲ ಸೌಲಭ್ಯಗಳನ್ನು ಒದಗಿಸತಕ್ಕದ್ದು. ಈ ನಿಟ್ಟಿನಲ್ಲಿ ಲೋಪ ಎಸಗಿದರೆ, ಆಯಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ (ಘನತ್ಯಾಜ್ಯ ನಿರ್ವಹಣೆ) ಮತ್ತು ಆರೋಗ್ಯ ನಿರೀಕ್ಷಕರನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ರ ಎಚ್ಚರಿಕೆ ನೀಡಿದ್ದಾರೆ.
ಆರ್‌ಟಿಜಿಎಸ್ ಮೂಲಕ ಪ್ರತಿ ತಿಂಗಳು 7ರ ಒಳಗೆ ಕಾರ್ಮಿಕರ ಖಾತೆಗೆ ವೇತನ ಜಮೆ, ಎಲ್ಲ ಕಾರ್ಮಿಕರಿಗೆ ಇಎಸ್‌ಐ ಸ್ಮಾರ್ಟ್ ಕಾರ್ಡ್, ಭವಿಷ್ಯನಿಧಿ ಪಾಸ್ ಪುಸ್ತಕ ಮತ್ತು ಗುರುತಿನಚೀಟಿ ವಿತರಣೆ, ರೊಟೇಷನ್ ಮಾದರಿಯಲ್ಲಿ ಪ್ರತಿ ಕಾರ್ಮಿಕರಿಗೆ ತಪ್ಪದೆ ವಾರದ ರಜೆ ನೀಡುವುದು, ರಾಷ್ಟ್ರೀಯ ಹಬ್ಬಗಳಲ್ಲಿ ವೇತನ ಸಹಿತ ರಜೆ, ಗರ್ಭಿಣಿಯರಿಗೆ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕು.
ಇದನ್ನೂ ಓದಿ:- ಬಿಜೆಪಿ ಮುಖಂಡರ ಪ್ರತಿಕೃತಿ ದಹಿಸಿ ಪ್ರತಿಭಟನೆ
ಅದೇ ರೀತಿ, ತ್ಯಾಜ್ಯ ವಿಂಗಡಣೆಯನ್ನು ಯಾವುದೇ ಕಾರಣಕ್ಕೂ ಕಾರ್ಮಿಕರ ಮೂಲಕ ಮಾಡಿಸಬಾರದು. ಮನೆಯಿಂದಲೇ ವಿಂಗಡಿಸಿದ ಮಾದರಿಯಲ್ಲಿ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಎಲ್ಲ ಕಾರ್ಮಿಕರಿಗೆ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಪ್ರಥಮ ಚಿಕಿತ್ಸಾ ಸೌಲಭ್ಯ, ಶುಚಿತ್ವ, ಸಮವಸ್ತ್ರ, ಕೈಗವಸು, ಮಾಸ್ಕ್, ಶೂಸ್ ಮತ್ತಿತರ ಸಾಧನಗಳನ್ನು ಪೂರೈಸಬೇಕು.
ಮಧ್ಯಾಹ್ನದ ಬಿಸಿಯೂಟ, ಪಾಲಿಕೆ ಶೌಚಾಲಯಗಳ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ. ಒಂದು ವೇಳೆ ಈ ಸೌಲಭ್ಯ ಕಲ್ಪಿಸದೆ ಇದ್ದರೆ, ಆಯಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮತ್ತು ಆರೋಗ್ಯ ನಿರೀಕ್ಷಕರನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.