ಮುಧೋಳ: ಜಿಲ್ಲೆಯಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಹಲವಾರು ಗ್ರಾಮಗಳು ಮುಳುಗಡೆಯಾಗಿ ಜನರು ಬೀದಿಗೆ ಬಿದ್ದಿದ್ದಾರೆ. ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಿ, ಸಂತ್ರಸ್ತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿಎಸ್‌ಎಸ್(ಭೀಮವಾದ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ರನ್ನ ಸರ್ಕಲ್‌ನಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಪರಶುರಾಮ ನೀಲನಾಯಕ ಮಾತನಾಡಿ, ನೆರೆ ಸಂತ್ರಸ್ತರ ನ್ಯಾಯಕ್ಕಾಗಿ ಜಿಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾ ಬಂದ್ ಮಾಡುವ ಬದಲು ಉಪಮುಖ್ಯಮಂತ್ರಿಗಳ ಮನೆಗೆ
ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಅಧಿಕಾರಿಗಳ ಒತ್ತಡದಿಂದ ಕೈಬಿಟ್ಟರೂ ಸರ್ಕಾರ ಗಮಹರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಶಾಸಕರ ಮನೆ ಎದುರು ಶೆಡ್ ಹಾಕಿಕೊಂಡು ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.
ತಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಗೋವಿಂದ ಕಾರಜೋಳರವರು ರಾಜ್ಯಕ್ಕೆ ಉಪಮುಖ್ಯಮಂತ್ರಿಗಳಾಗಿದ್ದು ಅವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತರಲ್ಲ. ಹೋರಾಟ ಮಾಡಲು ಎಲ್ಲರಿಗೂ ಸಮಾನ ಹಕ್ಕಿದೆ ಎಂದು ತಮ್ಮ ಹೋರಾಟವನ್ನು ಹತ್ತಿಕ್ಕುವ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಸಾಮಾಜಿಕ ನ್ಯಾಯಕ್ಕಾಗಿ ಸದಾಶಿವ ಆಯೋಗದ ವರದಿಯನ್ನು ಶಾಸನ ಸಭೆಯಲ್ಲಿ ಮಂಡಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು. ಕೂಡಲೇ ಪಿಟಿಸಿಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಬೇಕು, ರಾಜ್ಯ ಸರ್ಕಾರ ಎಸ್.ಸಿ. ಸಮುದಾಯಕ್ಕೆ ಶೇ. 15 ದಿಂದ ಶೇ. 17.5, ಎಸ್.ಟಿ. ಸಮುದಾಯಕ್ಕೆ ಶೇ. 7.5 ಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಬಾಲಕಿಯರ ಕೊಲೆ ಪ್ರಕರಣ ಖಂಡಿಸಿ, ಕೊಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಬಾಲಕಿಯರ ಕುಟುಂಬಗಳಿಗೆ ವಿಶೇಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ಪಡಿಯಪ್ಪ ಕಳ್ಳಿಮನಿ, ಯಮನಪ್ಪ ಗುಣದಾಳ, ಸತೀಶ ಗಾಡಿ, ಪ್ರಕಾಶ ಮಾಂಗ, ರವಿ ಮಾಚಕನೂರ, ಸುರೇಶ ನಡುವಿನಮನಿ, ವಿಠಲ ಮಿರ್ಜಿ, ಯಲ್ಲಪ್ಪ ತಳಗೇರಿ, ವಿಠಲ ತಳಗೇರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು