Advertisement

ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್‌ ಪೂರೈಸಿ

10:00 AM Oct 13, 2021 | Team Udayavani |

ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಒತ್ತಾಯಿಸಿದರು.

Advertisement

ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ಮಂಗಳವಾರ ಗುಲಬರ್ಗಾ ವಿದ್ಯುಶ್ಚಕ್ತಿ ಸರಬರಾಜ ಕಂಪನಿ ಕಾರ್ಯ ಮತ್ತು ಪಾಲನೆ ಉಪ ವಿಭಾಗವು ಕಲಬುರಗಿ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಚವ್ಹಾಣ ಅಧ್ಯಕ್ಷತೆಯಲ್ಲಿ ಜೆಸ್ಕಾಂ ಗ್ರಾಹಕರ ಸಂವಾದ ಸಭೆಯಲ್ಲಿ ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಎಲ್ಲೆಂದರಲ್ಲಿ ವಿದ್ಯುತ್‌ ಕಂಬಗಳು ಬಾಗಿದ್ದು, ತಂತಿಗಳು ನೆಲಕ್ಕೆ ಅಪ್ಪಳಿಸುತ್ತಿವೆ. ಇದರಿಂದ ಜನ-ಜಾನುವಾರು ಆತಂಕದಲ್ಲಿ ಕಾಲ ಕಾಳೆಯುವಂತಾಗಿದೆ. ಪಂಪಸೆಟ್‌ಗಳಿಗೆ ಸಕಾಲಕ್ಕೆ ವಿದ್ಯುತ್‌ ಪೂರೈಕೆ ಇಲ್ಲದೇ ಬೆಳೆ ಬೆಳೆಯಲು ಆಗುತ್ತಿಲ್ಲ. ಇರುವ ಟ್ರಾನ್ಸ್‌ಫಾರ್ಂಗಳಿಗೆ ಪಂಪಸೆಟ್‌ಗಳು ಹೆಚ್ಚಾಗಿ ಭಾರವಾಗುತ್ತಿದೆ. ಉಚಿತವಾಗಿ ಪಂಪಸೆಟ್‌ಗಳಿಗೆ ಹೆಚ್ಚಿನ ಟ್ರಾನ್ಸಫಾರ್ಂ ಒದಗಿಸಿ ಅನುಕೂಲ ಮಾಡಬೇಕು ಎಂದು ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ವಿಶ್ವನಾಥ ಜಮಾದಾರ ಕಲ್ಯಾಣಿ ತುಕಾಣಿ ಒತ್ತಾಯಿಸಿದರು.

ಪಂಪಸೆಟ್‌ಗೆ ಸಂಬಂಧಿತ ಟ್ರಾನ್ಸಫಾರ್ಂ ಸುಟ್ಟ ಮೂರು ದಿನಗಳಲ್ಲೇ ದುರಸ್ತಿ ಕೈಗೊಂಡು ವಿದ್ಯುತ್‌ ಪೂರೈಸಬೇಕು. ತಪ್ಪಿದ್ದಲ್ಲಿ ಸಿಬ್ಬಂದಿಗೆ ದಂಡವಿಧಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಹಣಕೊಟ್ಟರೆ ಟ್ರಾನ್ಸಾಫಾರ್ಂ ಕೆಲಸ ಮಾಡುತ್ತಾರೆ ಎಂದು ಸಭೆಯಲ್ಲಿ ರೈತರು ಮಾಡಿದ ಆರೋಪಕ್ಕೆ ಜೆಸ್ಕಾಂ ಎಇಇ ಮಾಣಿಕರಾವ್‌ ಕುಲಕರ್ಣಿ ಉತ್ತರಿಸಿ, ಹಣ ಕೊಡುವುದು ಮತ್ತು ಪಡೆಯುವುದು ಎರಡೂ ಅಪರಾಧವಾಗಿದೆ. ಇಂಥ ಪ್ರಕರಣಗಳಿದ್ದರೆ ಗಮನಕ್ಕೆ ತನ್ನಿ ಎಂದರು.

ನಾಗಣ್ಣಾ ಬಾಲಖೇಡೆ, ಖಲೀಲ ಉಸ್ತಾದ ಹೆಬಳಿ, ಮೋಘಾ ಬಿ. ಗ್ರಾಮದ ಮುಖಂಡ ನಾಗರಾಜ ಡಿ. ಪಾಟೀಲ, ಶಿವಶರಣ ಮೂಲಗೆ, ಲಕ್ಕಪ್ಪಾ ಮೇಲಿನಕೇರಿ ಹೊಸ ಆರ್.ಆರ್ ನಂಬರ್‌ಗೆ ಅರ್ಜಿ ಸಲ್ಲಿಸಿದ ರೈತರಿಗೆ ನಂಬರ್‌ ಒದಗಿಸಿ ಸಕಾಲಕ್ಕೆ ವಿದ್ಯುತ್‌ ಒದಗಿಸಬೇಕು. ವಿದ್ಯುತ್‌ ಪೂರೈಕೆ ಇಲ್ಲದಿರುವುದು ಬೆಳೆಗಾರರಿಗೆ ತೊಂದರೆ ಆಗುತ್ತಿದೆ. ತಕ್ಷಣವೇ ಕ್ರಮ ಕೈಗೊಳ್ಳಬೇಕು. ಸೌಭಾಗ್ಯದಡಿ ಸಂಪರ್ಕ ಕಲ್ಪಿಸಿರುವ ಗ್ರಾಹಕರಿಗೆ ಬಿಲ್‌ ನೀಡಬಾರದು ಎಂದು ಅಧಿಕಾರಿಗಳ ಗಮನಕ್ಕೆ ತಂದರು.

Advertisement

ಇದನ್ನೂ ಓದಿ: ಜೀತ ಮಾಡಲು ಸಿದ್ಧರಾದ ಡೈನಾಮಿಕ್‌ ಹೀರೋ ದೇವರಾಜ್‌

ಸಮಸ್ಯೆಗಳನ್ನು ಆಲಿಸಿದ ಸಂತೋಷ ಚವ್ಹಾಣ ಹಾಜರಿದ್ದ ವಿವಿಧ ಶಾಖಾಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದರು. ಆಳಂದ ಜೆಸ್ಕಾಂ ಶಾಖೆಯ ಸಿದ್ರಾಮಪ್ಪ ನಿಂಬಾಳ, ಎಇ ವಿಕಾಸ, ಮಾದನಹಿಪ್ಪರಗಾದ ಪರಮೇಶ್ವರ ಬಡಿಗೇರ, ಸರಸಂಬಾದ ಯಲ್ಲಾಲಿಂಗ ಶಿರೂರ, ಆಳಂದ ಶಶಿ ಸರಸಂಬಿ ಮತ್ತಿತರರು ಹಾಜರಿದ್ದರು.

ಮಳೆಯಿಂದ ತಾಲೂಕಿನಲ್ಲಿ ಜೆಸ್ಕಾಂಗೆ ಸುಮಾರು 50 ಲಕ್ಷ ರೂ. ಹಾನಿಯಾಗಿದೆ. 700 ಕಂಬಗಳ ಪರಿವರ್ತಕ ಹಾಳಾಗಿವೆ. ಅನೇಕರ ಐಪಿಸೆಟ್‌ ಕೆಟ್ಟಸ್ಥಿತಿಯಲ್ಲಿವೆ. ಅಮರ್ಜಾ ಅಣೆಕಟ್ಟೆ ನೀರು ಹರಿಬಿಟ್ಟಿದ್ದರಿಂದ ಭೂಸನೂರ ವಲಯದಲ್ಲಿ ವಿದ್ಯುತ್‌ ಕಂಬಗಳು ಕೊಚ್ಚಿಹೋಗಿವೆ. ಜೊತೆಗೆ ರೈತರ ಪಂಪಸೆಟ್‌ಗಳು ವಿದ್ಯುತ್‌ ಪರಿಕರಗಳು ನಷ್ಟವಾಗಿವೆ. ನೀರಿನ ಪ್ರವಾಹದಲ್ಲಿನ ಟ್ರಾನ್ಸ್‌ಫಾರ್ಂ ಮತ್ತು ವಿದ್ಯುತ್‌ ತಂತಿಗಳನ್ನು ಸರಿಪಡಿಸಲು ಸಿಬ್ಬಂದಿ ಸರಿಪಡಿಸಲು ಶ್ರಮಿಸುತ್ತಿದ್ದಾರೆ. ಸಮಸ್ಯೆಗಳಿದ್ದರೆ ಶಾಖಾಧಿಕಾರಿಗಳು ಅಥವಾ ಕಾರ್ಮಿಕ ಮಿತ್ರರ ಗಮನಕ್ಕೆ ತರಬೇಕು.

ಮಾಣಿಕರಾವ್‌ ಕುಲಕರ್ಣಿ, ಜೆಸ್ಕಾಂ, ಎಇಇ

ರುದ್ರವಾಡಿ ಗ್ರಾಮದ ನನ್ನ ಹೊಲದಲ್ಲಿ ಎರಡು ವರ್ಷಗಳಿಂದ ಬಾಗಿದ ವಿದ್ಯುತ್‌ ಕಂಬ ಸರಿಪಡಿಸುವಂತೆ ಅರ್ಜಿ ಸಲ್ಲಿಸಿದರೂ ಸ್ವೀಕರಿಸಿರಲಿಲ್ಲ. ರಿಜಿಸ್ಟರ್ ಪೋಸ್ಟ್‌ ಮೂಲಕ ಅರ್ಜಿ ಸಲ್ಲಿಸಿದರೂ ಸ್ಪಂದಿಸಿಲ್ಲ. 4 ಸಾವಿರ ರೂ. ಕೇಳಿದ್ದರು. ಇದರಿಂದ ಬೇಸತ್ತು ಪತ್ರಿಕೆಗಳಿಗೆ ತಿಳಿಸಲಾಗಿತ್ತು. ಸುದ್ದಿ ಪ್ರಕಟವಾದ ಎರಡು ದಿನದಲ್ಲಿ ದುರಸ್ತೆ ಮಾಡಿದ್ದಾರೆ.

ಚಂದ್ರಕಾಂತ ಖೋಬ್ರೆ, ರೈತ, ರುದ್ರವಾಡಿ

Advertisement

Udayavani is now on Telegram. Click here to join our channel and stay updated with the latest news.

Next