Advertisement

ಸಮರ್ಪಕ ಕುಡಿಯುವ ನೀರು ಪೂರೈಸಿ

09:46 AM Feb 07, 2019 | Team Udayavani |

ಗಜೇಂದ್ರಗಡ: ಸಮರ್ಪಕ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾದ ಜಿಲ್ಲಾಡಳಿತ ಮತ್ತು ಪುರಸಭೆ ನಡೆ ಖಂಡಿಸಿ ಬಿಜೆಪಿ ವತಿಯಿಂದ ಬುಧವಾರ ತಹಶೀಲ್ದಾರ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಿದರು.

Advertisement

ನೂತನ ತಾಲೂಕು ಗಜೇಂದ್ರಗಡ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವಾಗಲೇ ಪುರಸಭೆ ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುತ್ತಿಲ್ಲ. ಈ ಕುಡಿಯುವ ನೀರಿನಲ್ಲೂ ರಾಜಕೀಯ ಬೆರೆಸು ತ್ತಿದ್ದಾರೆ. ಸ್ವಾರ್ಥ ಸಾಧನೆಗಾಗಿ ಸಾರ್ವಜನಿಕರ ಹಿತ ಮರೆತು ರಾಜಕಾರಣ ಮಾಡುವುದು ಸರಿಯಲ್ಲ ಎಂದು ದೂರಿದರು.

ನೀರು ಪೂರೈಕೆಗಾಗಿ ಅಧಿಕಾರಿಗಳು ಯೋಜನೆ ಸಿದ್ಧಪಡಿಸುತ್ತಿದ್ದರೆ, ಅದಕ್ಕೆ ಕಾಣದ ಕೈಗಳು ತಡೆಯೊಡ್ಡುತ್ತಿವೆ. ಅಭಿವೃದ್ಧಿ ಸಹಿಸದೇ ಒಂದಿಲ್ಲ ಒಂದು ರೀತಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಮೈತ್ರಿ ಸರ್ಕಾರದ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಲವಾರು ತಿಂಗಳಿಂದ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಯುದ್ಧ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ದಿನದ ದುಡಿಮೆ ಬಿಟ್ಟು ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ನಿತ್ಯ ಸಾರ್ವಜನಿಕರು ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಮಾತ್ರ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳದೇ, ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.

ಪಟ್ಟಣದಲ್ಲಿ ಅವೈಜ್ಞಾನಿಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಯಾವೂಂದೂ ವೈಜ್ಞಾನಿಕ ಯೋಜನೆ ರೂಪಿಸುತ್ತಿಲ್ಲ. ಕೂಡಲೇ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

Advertisement

ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಅಧಿಕಾರಿಗಳು ರಾಜಕಾರಣಿಗಳು ಮಾತು ಕೇಳುತ್ತಿದ್ದಾರೆ. ಕ್ಷೇತ್ರದ ಶಾಸಕರು ಯಾವುದಾದರೂ ಯೋಜನೆ ರೂಪಿಸಿದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಜನಸಾಮಾನ್ಯರ ಕಷ್ಟ ಕಾರ್ಪಣ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕೂಡಲೇ ಪುರಸಭೆ ಟ್ಯಾಂಕರ್‌ ಮೂಲಕ ನೀರು ಪೂರೈಸದಿದ್ದರೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಮತ್ತು ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಅವರು ಪ್ರತಿಭಟನಾಕಾರರ ಅಹವಾಲು ಆಲಿಸಿದರು.

ನಂತರ ಮಾತನಾಡಿದ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ಪಟ್ಟಣದಲ್ಲಿನ ಕುಡಿಯುವ ನೀರಿನ ಪೈಪ್‌ಲೈನ್‌ಗಳಲ್ಲಿ ಪ್ಲೋರೈಡ್‌ ತುಂಬಿದ ಪರಿಣಾಮ ಪೈಪ್‌ಲೈನ್‌ಗಳು ಒಡೆಯುತ್ತಿವೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ ಖಾಸಗಿಯವರ 6 ಕೊಳವೆಬಾವಿಗಳಿಂದ ನೀರು ಪಡೆಯಲಾಗುವುದು. ತುರ್ತಾಗಿ ಪೈಪ್‌ಲೈನ್‌ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಮಾತನಾಡಿ, ಹೆಚ್ಚಿನ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲು ಯತ್ನಿಸಲಾಗುತ್ತಿದೆ. ಪುರಸಭೆಯಿಂದ 3 ಕೊಳವೆಬಾವಿ ಕೊರೆಸಲಾಗಿದೆ. ಅದರಲ್ಲಿ 1 ಕೊಳವೆ ಬಾವಿಯಲ್ಲಿ ನೀರು ದೊರೆತಿದ್ದು, ಮುಂದಿನ ದಿನಗಳಲ್ಲಿ 10 ದಿನಕ್ಕೊಮ್ಮೆ ನೀರು ಪೂರೈಸಲು ಎಲ್ಲ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೊಪ್ಪದ ಪ್ರತಿಭಟನಾಕಾರರು ತಕ್ಷಣದಿಂದಲೇ ಟ್ಯಾಂಕರ್‌ ನೀರು ಪೂರೈಸಲು ಪುರಸಭೆ ಮುಂದಾಗಬೇಕು ಎಂದು ಪಟ್ಟು ಹಿಡಿದು ಕುಳಿತರು. ಆಗ ಅಧಿಕಾರಿಗಳು ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು. ಬಳಿಕ ಪ್ರತಿಭಟನೆ ಹಿಂಪಡೆದರು.

ಪುರಸಭೆ ಸದಸ್ಯರಾದ ಮುದಿಯಪ್ಪ ಮುಧೋಳ, ಕನಕಪ್ಪ ಅರಳಿಗಿಡದ, ರೂಪೇಶ ರಾಠೊಡ, ಭಾಸ್ಕರ ರಾಯಬಾಗಿ, ಬಿ.ಎಂ. ಸಜ್ಜನರ, ಅಶೋಕ ವನ್ನಾಲ, ದುರುಗಪ್ಪ ಮುಧೋಳ, ಮಂಜುನಾಥ ಮ್ಯಾಕಲ್‌, ಶರಣಪ್ಪ ಚಳಗೇರಿ, ಸಿದ್ದಪ್ಪ ಬಳಿಗೇರ, ವಸಂತರಾವ್‌ ಮೋಹಿತೆ, ರಾಜೇಂದ್ರ ಘೋರ್ಪಡೆ, ಉಮಾ ಮ್ಯಾಕಲ್‌, ಶಶಿಕಲಾ ಸವಣೂರ, ಕೌಸರಬಾನು ಹುನಗುಂದ, ಲಕ್ಷ್ಮೀ ಮುಧೋಳ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next