Advertisement

ಹಳ್ಳಿಗಳಿಗೆ ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಿ

10:24 AM Aug 02, 2019 | Suhan S |

ಬ್ಯಾಡಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್‌ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಬುಧವಾರ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥಾಪಕರ ಮೂಲಕ ವಿಭಾಗೀಯ ನಿಯಂತ್ರಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

Advertisement

ಎಬಿವಿಪಿ ಘಟಕದ ತಾಲೂಕು ಸಂಚಾಲಕ ಜಿ.ಎನ್‌.ಹೊನ್ನಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಹಾಜರಾತಿ ಕೊಡುವ ದೃಷ್ಟಿಯಿಂದ ಬಹುತೇಕ ಶಾಲಾ ಕಾಲೇಜುಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಲಾಗಿದೆ. ಕನಿಷ್ಟ ಶೇ. 75ರಷ್ಟು ಕಡ್ಡಾಯ ಹಾಜರಾತಿ ಇಲ್ಲದಿದ್ದರೇ ಮುಂದಿನ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ನೀಡುವುದಿಲ್ಲ ಹೀಗಾಗಿ ನಿತ್ಯವೂ ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಹೋಗುತ್ತಿದ್ದು ಅವರ ಭವಿಷ್ಯಕ್ಕೆ ಸಾರಿಗೆ ಸೌಕರ್ಯ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಆರೋಪಿಸಿದರು.

ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಬಸ್‌ ಸೌಲಭ್ಯ ಸಮರ್ಪಕವಾಗಿಲ್ಲ. ಅದರಲ್ಲೂ ಗ್ರಾಮೀಣ ಸಾರಿಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಸರಿಯಾದ ಸಮಯಕ್ಕೆ ಬಸ್‌ ಬಾರದ್ದರಿಂದ ಶಾಲಾ, ಕಾಲೇಜುಗಳಿಗೆ ತೆರಳಲಾಗುತ್ತಿಲ್ಲ. ಬ್ಯಾಡಗಿ ಕೇವಲ 64 ಗ್ರಾಮಗಳಿರುವ ಒಂದು ಸಣ್ಣ ತಾಲೂಕು, ಹೀಗಿದ್ದರೂ ಸಹ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸದೇ ಇರುವುದು ದುರಂತ. ಕೂಡಲೇ ಎಲ್ಲ ಗ್ರಾಮಗಳಿಗೂ ಸಮಯಕ್ಕೆ ಸರಿಯಾಗಿ ಬಸ್‌ ತಲುಪುವಂತೆ ನೋಡಿಕೊಳ್ಳಲು ಆಗ್ರಹಿಸಿದರು.

ಚಂದ್ರು ಕುಮ್ಮೂರ ಮಾತನಾಡಿ, ಪಟ್ಟಣದ ಶಿಡೇನೂರ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿಗೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಒಟ್ಟು 320ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿದಿನ ಬರುತ್ತಿದ್ದಾರೆ. ಆದರೆ, ಹಿರೇಕೆರೂರ ಕಡೆಯಿಂದ ಬ್ಯಾಡಗಿ ಮಾರ್ಗವಾಗಿ ಬರುವ ಕೇವಲ 2 ಬಸ್ಸು ಸಾಕಾಗುವುದಿಲ್ಲ. ಮಕ್ಕಳ ಅಗತ್ಯಕ್ಕನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಕೃಷ್ಣ ಪಾಟೀಲ, ವಿನಾಯಕ ಶಿರೂರ, ಪರಮೇಶ ತಿಮ್ಮಾಪುರ, ಸಂಜೀವ, ಪಿ.ರಮೇಶ ಶ್ರೀಧರ ಮಂಜುನಾಥ ತಾಹೀರ, ಗಿರೀಶ, ಬಸವರಾಜ, ಕಿರಣ ಚಂದ್ರಶೇಖರ, ಡಿ.ಕೆ.ಮಹದೇವಪ್ಪ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next