Advertisement

ಶೀಘ್ರ ವಸತಿ-ಸಾರಿಗೆ ವ್ಯವಸ್ಥೆ ವರದಿ ನೀಡಿ

12:26 PM Jan 07, 2020 | Team Udayavani |

ಕಲಬುರಗಿ: ಸಮ್ಮೇಳನ ಯಶಸ್ವಿಯಲ್ಲಿ ವಸತಿ ಹಾಗೂ ಸಾರಿಗೆ ವ್ಯವಸ್ಥೆಯೂ ಪ್ರಮುಖವಾಗಿರುವುದರಿಂದ ಈ ಎರಡರಲ್ಲಿ ಎಳ್ಳು ಕಾಳಷ್ಟು ಲೋಪವಾಗದಂತೆ ಕ್ರಮ ಕೈಗೊಳ್ಳುವುದು ಬಹಳ ಅಗತ್ಯವಿದೆ ಎಂದು ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಸತಿ ಹಾಗೂ ಸಾರಿಗೆ ವ್ಯವಸ್ಥೆಯ ಅಧ್ಯಕ್ಷ ಹಾಗೂ ಶಾಸಕರಾದ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಭಾಗವಹಿಸುವ ಆಹ್ವಾನಿತರಿಗೆ ವಸತಿ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಗುರುವಾರದ ಸಂಜೆಯೊಳಗೆ ವಸತಿ ಹಾಗೂ ಸಾರಿಗೆ ವ್ಯವಸ್ಥೆ ಕುರಿತಂತೆ ವರದಿ ನೀಡಿ ಎಂದು ಸೂಚಿಸಿದರು.

ಮೂರು ದಶಕಗಳ ನಂತರ ನುಡಿಹಬ್ಬ ಆಯೋಜಿಸುವ ಅವಕಾಶ ಜಿಲ್ಲೆಗೆ ದೊರಕಿದ್ದು, ತಾವು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕೇಂದ್ರ ಸಮಿತಿಯೊಂದಿಗೆ ಮಾತನಾಡಿ ಈ ಸಲದ ಸಮ್ಮೇಳನ ಕಲಬುರಗಿಯಲ್ಲಿ ನಡೆಸುವಂತೆ ಒತ್ತಾಯಿಸಿದ್ದೆ. ಈಗ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದೆ. ನಾವೆಲ್ಲ ಸೇರಿ ಸಮ್ಮೇಳನ ಯಶಸ್ವಿಗೆ ಸಹಕಾರದೊಂದಿಗೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ನಗರದಲ್ಲಿ ಇರುವ ಹೊಟೇಲ್‌, ವಸತಿ ಶಾಲೆಗಳು, ಹೌಸಿಂಗ್‌ ಬೋರ್ಡ್‌ ವಸತಿ ನಿಲಯಗಳು, ಕಲ್ಯಾಣ ಮಂಟಪಗಳನ್ನು ವಸತಿಗೆ ಹಾಗೂ ಖಾಸಗಿ ಶಾಲೆಗಳ, ಖಾಸಗಿ ವಾಹನಗಳ ಡೀಲರ್‌ಗಳೊಂದಿಗೆ ಮಾತನಾಡಿ ವಾಹನ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ. ಒಟ್ಟು 1,200 ರೂಮ್‌ ಗಳನ್ನು ವ್ಯವಸ್ಥೆ ಮಾಡಬೇಕಾಗಿದ್ದು, ಈಗ 850 ರೂಮ್‌ ಗಳನ್ನು ಗುರುತಿಸಲಾಗಿದೆ. ನಗರದ ಹೊಟೇಲ್‌ಗ‌ಳು, ಕಲ್ಯಾಣ ಮಂಟಪಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಮ್ಮೇಳನದ ಆಹ್ವಾನಿತರಿಗೆ ಹಾಗೂ ಸಮ್ಮೇಳನಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗಲು ಅಗತ್ಯ ಸಾರಿಗೆ ಮಾಡಲಾಗುತ್ತಿದೆ. 50 ಇನ್ನೋವಾ, 50 ಕ್ರೂಸರ್‌ಗಳನ್ನು, 20 ಸರಕಾರಿ ಬಸ್‌ಗಳು, ಪ್ರತಿ ತಾಲೂಕಿನಿಂದ ಕಲಬುರಗಿಗೆ ಬೆಳಿಗ್ಗೆ ಹಾಗೂ ರಾತ್ರಿ ಮತ್ತೆ ವಾಪಸ್‌ ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ. ಸಮ್ಮೇಳನಕ್ಕೆ ಬರುವ ಆಹ್ವಾನಿತರನ್ನು ಎ, ಬಿ ಹಾಗೂ ಸಿ ಕೆಟಗರಿ ಎಂದು ವಿಭಾಗಿಸಲಾಗಿದೆ ಎಂದು ಸಿಇಒ ರಾಜಾ ತಿಳಿಸಿದರು.

ಸರಕಾರಿ ವಸತಿ ಶಾಲೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌, ವ್ಯವಸ್ಥೆ ಮಾಡಿ. ಕಲಾ ತಂಡಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಸಿ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಸತಿ ನಿಲಯಗಳ ಸುತ್ತಮುತ್ತ ಫಾಗಿಂಗ್‌ ವ್ಯವಸ್ಥೆ, ಮೇಣಬತ್ತಿ ವ್ಯವಸ್ಥೆ ಮಾಡಿ. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಿಸಬೇಕು. ಅಗತ್ಯವಿರುವ ಕಡೆಗಳೆಲ್ಲ ಒನ್‌ ವೇ ಮಾಡಿ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಖರ್ಗೆ ಸೂಚಿಸಿದರು.

Advertisement

ಆಹ್ವಾನಿತರಿಗೆ ಬೇಕಾಗುವ ಹಾಸಿಗೆ, ಮಗ್‌, ಬಕೆಟ್‌ ಇತ್ಯಾದಿಗಳನ್ನು ಖರೀದಿಸಿ ಅದರಲ್ಲಿ ಪಾರದರ್ಶಕತೆ ಇರಲಿ. ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಪೊಲೀಸರು ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು. ಜಾಸ್ತಿ ಜನರು (200ಕ್ಕೂ ಅಧಿಕ) ವಸತಿಯಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ನಿರ್ದೇಶಿಸಿದರು. ಜಿಪಂ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ್‌ ಮರಗುತ್ತಿ, ಜಿಪಂ ಸಿಇಒ ಪ್ರವೀಣಾ ಪ್ರಿಯಾ ಡೇವಿಡ್‌, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next