ಯಾದಗಿರಿ: ಯುವಶಕ್ತಿ ದೇಶದ ಶಕ್ತಿ, ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ತರಬೇತಿ ಕಾರ್ಯಕ್ರಮ ರೂಪಿಸುವುದರಿಂದ ಯುವಕರ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಘ- ಸಂಸ್ಥೆಗಳ ಹಾಗೂ ಯುವನೀತಿ ಸಮಿತಿ ಸದಸ್ಯರನ್ನು ಒಳಗೊಂಡ ಸ್ಟೇಕ್ ಹೋಲ್ಡರ್ಸ್ ಸಭೆ ನಡೆಸಿ ಅವರು ಮಾತನಾಡಿದರು.
ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಪಡೆಯಲು ಇರುವ ಅವಕಾಶಗಳ ಬಗ್ಗೆ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮಾಂತರ ಪ್ರದೇಶಗಳ ಯುವತಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕಾರ್ಯಕ್ರಮ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನರೇಗಾ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾ ಸೌಲಭ್ಯ ಕಲ್ಪಿಸಲು ಅಗತ್ಯ ಅನುದಾನ ಮೀಸಲಿಟ್ಟು ಜಿಪಂ ವತಿಯಿಂದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಿ. ಯುವ ಜನತೆ ಕ್ರೀಡೆ ಮತ್ತು ಇತರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯುವಕ-ಯುವತಿ ಸಂಘದ ನೋಂದಣಿ ಮತ್ತು ನವೀಕರಣ ವಿಧಾನ ಸರಳವಾಗಿಸುವುದು, ಈ ಮೊದಲು ಜಾರಿಯಲ್ಲಿದ್ದ ಜಿಲ್ಲಾ ಯುವ ಪ್ರಶಸ್ತಿ, ಗ್ರಾಮೀಣ ಕ್ರೀಡೋತ್ಸವ ಮತ್ತು ಗ್ರಾಮಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಪುನರ್ ಆರಂಭಿಸಲು ಅಗತ್ಯವಿರುವ ನಿಯಾಮಾವಳಿ ಯುವ ನೀತಿಯಲ್ಲಿ ಅಳವಡಿಸಲು ಭಾಗವಹಿಸಿದ ಸಂಘ-ಸಂಸ್ಥೆಯ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಹಬ್ ಕಾರ್ಯಗತಗೊಳಿಸಿ ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆ, ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಜಾರಿಗೊಳಿಸಲಾಗುತ್ತಿದೆ. ಇತರೆ ಸಂಸ್ಥೆಗಳ ಮೂಲಕ ಉದ್ಯೋಗ ಮೇಳ ಆಯೋಜಿಸಿ ಯುವಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ವೇಳೆ ಎಸ್ಪಿ ಸಿ.ಬಿ. ವೇದಮೂರ್ತಿ, ಜಿಪಂ ಸಿಇಒ ಅಮರೇಶ ಆರ್., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್., ಸಂಘ-ಸಂಸ್ಥೆಯ ಪ್ರತಿನಿಧಿಗಳಾದ ಆನಂದ ರಾಠೊಡ್, ಭೀಮರಾಯ ವಡವಟ್ಟಿ ಇತರರು ಇದ್ದರು.