Advertisement

ದಿನವೂ 1,200 ಮೆ. ಟನ್‌ ಆಕ್ಸಿಜನ್‌ ಕೊಡಿ : ಕೇಂದ್ರಕ್ಕೆ ಹೈಕೋರ್ಟ್‌ ತಾಕೀತು

12:58 AM May 06, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯಕ್ಕೆ ಪ್ರತಿ ದಿನ 1,200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಪೂರೈಸಬೇಕು ಎಂದು ಕೇಂದ್ರ ಸರಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

Advertisement

ಕೋವಿಡ್‌ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ.ಎ.ಎಸ್‌. ಓಕಾ ಮತ್ತು ನ್ಯಾ.ಅರವಿಂದ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದೆ.

ರಾಜ್ಯಗಳು ಉತ್ಪಾದಿಸುವ ಆಕ್ಸಿಜನ್‌ ಅನ್ನು ಆಯಾ ರಾಜ್ಯಗಳೇ ಬಳಸು ವಂತೆಯೂ ತೀರ್ಮಾನಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಪ್ರಿಲ್‌ 30ರ ಅಂದಾಜು ಬೇಡಿಕೆಯ ಜತೆಗೆ, ಮುಂದಿನ ಒಂದು ವಾರದ ಆಕ್ಸಿಜನ್‌ ಬೇಡಿಕೆಯ ಅಂದಾಜಿನ ಪರಿಷ್ಕೃತ ಮನವಿಯನ್ನು ರಾಜ್ಯ ಸರಕಾರ ತತ್‌ಕ್ಷಣ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಆ ಮನವಿ ಬಗ್ಗೆ ಕೇಂದ್ರ ಸರಕಾರ 4 ದಿನಗಳಲ್ಲಿ ತೀರ್ಮಾನ ಕೈಗೊಳ್ಳಬೇಕು. ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ 4 ದಿನಗಳ ಮಟ್ಟಿಗೆ ರಾಜ್ಯಕ್ಕೆ ತಾತ್ಕಾಲಿಕವಾಗಿ ಪ್ರತಿದಿನ 1,200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಪೂರೈಸಬೇಕು. ರಾಜ್ಯದಲ್ಲಿ ಸದ್ಯ 4.62 ಲಕ್ಷ ಸೋಂಕಿತರಿದ್ದು, ಚಿಕಿತ್ಸೆ ನೀಡಲು ರಾಜ್ಯದ ಬೇಡಿಕೆಯನ್ನು ಈಡೇರಿಸಿ ಎಂದು ನ್ಯಾಯಪೀಠ ಆದೇಶಿಸಿತು.

ಕೇಂದ್ರ ಪರ ವಾದ ಮಂಡಿಸಿದ ಎಎಸ್‌ಜಿ ಎಂ.ಬಿ. ನರಗುಂದ್‌, ರಾಜ್ಯಕ್ಕೆ 100 ಮೆಟ್ರಿಕ್‌ ಟನ್‌ ಹೆಚ್ಚುವರಿ ಆಕ್ಸಿಜನ್‌ ಸೇರಿದಂತೆ ಒಟ್ಟು 965 ಮೆ.ಟನ್‌ ಪೂರೈಸಲಾಗುವುದು ಎಂದರು.

Advertisement

ರಾಜ್ಯ ಸರಕಾರ ಪರ ವಾದ ಮಂಡಿಸಿದ ಪ್ರತಿಮಾ ಹೊನ್ನಾಪುರ, ವಿಶಾಖಪಟ್ಟಣ, ಒರಿಸ್ಸಾದಿಂದ 110 ಮೆ. ಟನ್‌ ಹಂಚಿಕೆಯಾಗಿದ್ದು, ಸಾಗಣೆ ಯಲ್ಲಿ ವಿಳಂಬವಾಗುತ್ತಿದೆ ಎಂದರು.

ಪ್ರಮುಖ ನಿರ್ದೇಶನಗಳು :

ಜಿಲ್ಲೆಗಳಲ್ಲಿ  ಸೋಂಕಿತರಿಗೆ ಪ್ರತ್ಯೇಕ ಸಹಾಯವಾಣಿ ಆರಂಭಿಸಿ

ಆಮ್ಲಜನಕ ಹಂಚಿಕೆ ಸಂಬಂಧ ಸ್ಪಷ್ಟ ನೀತಿ ಅವಶ್ಯ.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಸಂಘಟಿತ ವಲಯದ ಕಾರ್ಮಿ ಕರಿಗೆ ಆಹಾರ ಭದ್ರತೆ ಒದಗಿಸಿ. ಸ್ಥಗಿತಗೊಂಡ ಕೆಲ ಕೈಗಾರಿಕೆಗಳ ಕಾರ್ಮಿಕರ ಆದಾಯದ ಬಗ್ಗೆಯೂ ಯೋಚಿಸಿ.

ಹಾಸಿಗೆ ಲಭ್ಯತೆ, ಹೆಚ್ಚಳಕ್ಕೆ ಕೈಗೊಂಡ ಕ್ರಮ  ವಿವರಿಸಿ

ಎಲ್ಲಾ ಜಿಲ್ಲೆಗಳಿಗೆ ಆಗುವಂತೆ ಆಕ್ಸಿಜನ್‌ ಘಟಕ ಸ್ಥಾಪಿಸುವ ಕೇಂದ್ರದ ನಿರ್ಧಾರ ಬಗ್ಗೆ ರಾಜ್ಯ ದಲ್ಲಿ ಏನಾಗಿದೆ ಎಂದು ತಿಳಿಸಿ.

ರೆಮಿಡಿಸಿವಿರ್‌ ಹೆಚ್ಚಿಸಿ :

ರಾಜ್ಯಕ್ಕೆ ಅಗತ್ಯ ರೆಮಿಡಿಸಿವಿರ್‌ ಹಂಚಿಕೆ ಬಗ್ಗೆ 2 ದಿನದಲ್ಲಿ ನಿರ್ಧರಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದ ನ್ಯಾಯಪೀಠ, ರಾಜ್ಯಕ್ಕೆ ಪ್ರತಿದಿನ 44,500 ವಯಲ್ಸ್ ಅಗತ್ಯವಿದ್ದು, 15,580 ವಯಲ್ಸ್ ಪೂರೈಕೆಯಾಗುತ್ತಿದೆ. ಹಾಗಾಗಿ ಪರಿಸ್ಥಿತಿ ಅರಿತು ಕೂಡಲೇ ಹಂಚಿಕೆ ಹೆಚ್ಚಳ ಮಾಡಿ ಎಂದು ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next