ನವದೆಹಲಿ: ನಾಳೆಯೇ (ಮಂಗಳವಾರ) ಬಹುಮತ ಸಾಬೀತುಪಡಿಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಗೆ ಗವರ್ನರ್ ಲಾಲ್ಜಿ ಟಂಡನ್ ಪತ್ರವನ್ನು ಬರೆದಿದ್ದು, ಒಂದು ವೇಳೆ ಬಹುಮತ ಸಾಬೀತುಪಡಿಸದಿದ್ದರೆ ನಿಮ್ಮ(ಕಮಲ್ ನಾಥ್) ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಪರಿಗಣಿಸುವುದಾಗಿ ತಿಳಿಸಿದ್ದಾರೆ.
ಸೋಮವಾರ ಮಧ್ಯಪ್ರದೇಶ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆಯೇ ಸ್ಪೀಕರ್ ಪ್ರಜಾಪತಿ ಅವರು ಗವರ್ನರ್ ಸೂಚನೆಯನ್ನು ಕಡೆಗಣಿಸಿ ವಿಧಾನಸಭೆ ಕಲಾಪವನ್ನು ಕೊರೊನಾ ವೈರಸ್ ಭೀತಿ ನೆಪವೊಡ್ಡಿ ಮಾರ್ಚ್ 26ರವರೆಗೆ ಮುಂದೂಡಿದ್ದರು.
ಏತನ್ಮಧ್ಯೆ ಭಾರತೀಯ ಜನತಾ ಪಕ್ಷ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಕೂಡಲೇ ಬಹುಮತ ಸಾಬೀತುಪಡಿಸುವಂತೆ ಕಮಲ್ ನಾಥ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು.
ಕಮಲ್ ನಾಥ್ ಬರೆದಿರುವ ಪತ್ರದಲ್ಲಿ ಬಳಸಿರುವ ಭಾಷೆ ಅಸಂಸದೀಯವಾಗಿದೆ…ಅಲ್ಲದೇ ಬಹುಮತ ಸಾಬೀತಿಗೆ ನಿರಾಕರಿಸಲು ನೀಡಿರುವ ಕಾರಣಗಳು ಆಧಾರರಹಿತವಾಗಿದೆ ಎಂದು ರಾಜ್ಯಪಾಲರು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ನೀವು ಬರೆದಿರುವ ನಿಮ್ಮ ಪತ್ರ ಸಂಸದೀಯ ನಡಾವಳಿಯನ್ನು ಉಲ್ಲಂಘಿಸಿದೆ. ನಿಮಗೆ ಬಹುಮತ ಸಾಬೀತುಪಡಿಸಲು ನೀಡಿರುವ ಸಮಯಾವಕಾಶ ಹೆಚ್ಚೇ ಆಗಿತ್ತು. ಆದರೂ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅಸಾಧ್ಯ ಎಂಬುದು ನಿಮ್ಮ ಅಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಗವರ್ನರ್ ತಿರುಗೇಟು ನೀಡಿದ್ದಾರೆ.