Advertisement

ರೈತಹಿತ ಚಿಂತಕ ಯಡಿಯೂರಪ್ಪನವರ ಮಗನೆಂದು ಹೇಳಿಕೊಳ್ಳಲು ಹೆಮ್ಮೆ: ವಿಜಯೇಂದ್ರ

02:28 PM Feb 04, 2024 | Team Udayavani |

ವಿಜಯಪುರ : ರಾಜ್ಯದಲ್ಲಿ ಮನಗೂಳಿ ಹಿರೇಮಠವೂ ಸೇರಿದಂತೆ ವೀರಶೈವ ಮಠಗಳು ಅನ್ನ, ಅಕ್ಷರ, ವಸತಿ ಸಹಿತ ತ್ರಿವಿಧ ದಾಸೋಹದಂಥ ಸಮಾಜಮುಖಿ ಕೆಲಸ ಮಾಡುತ್ತಿವೆ. ಅದೇ ರೀತಿ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರು ರೈತ ಪರವಾದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ನಾನು ಯಡಿಯೂರಪ್ಪ ಅವರ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ಭಾನುವಾರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಹಿರೇಮಠ ಸಂಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತಪರ ಕಲ್ಯಾಣ ಕಾರ್ಯಕ್ರಮಗಳನ್ನು ಹಾಗೂ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವ ಮಠಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

ಯಾವುದೇ ವ್ಯಕ್ತಿ ಸಮಾಜದಲ್ಲಿ ಬೆಳೆಯಲು, ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಲು ಮಠಾಧೀಶರು, ತಾಯಂದಿರ ಆಶೀರ್ವಾದ ಮುಖ್ಯವಾಗುತ್ತದೆ ಎಂದರು.

ರೈತ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಸದಾ ರೈತಪರ ಕಾಳಜಿಯನ್ನೇ ಮಾಡುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ರೈತರ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರು. ನಾಡುಕಂಡ ರೈತಚಿಂತನೆಯ ಧೀಮಂತ ನಾಯಕ ಯಡಿಯೂರಪ್ಪ ಜನತೆಯ ಆಶೀರ್ವಾದದಿಂದ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದರು ಎಂದು ಸಮ್ಮತಿಸಿದರು.

ಇದೀಗ ಅವರ ಮಗನಾಗಿ ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದು, ನನಗೂ ನಾಡಿನ ಜನತೆಯ ಆಶೀರ್ವಾದ ಮಾಡಬೇಕು. ರಾಜಕೀಯವಾಗಿ ಎಷ್ಟು ಎತ್ತರಕ್ಕೆ ಬೆಳೆಯುತ್ತೇವೆ ಎಂಬುದಕ್ಕಿಂತ ನನ್ನಿಂದ ಸಮಾಜಕ್ಕೆ ಆಗಿರುವ ಕೆಲಸವೇನು ಎಂಬುದೇ ಮುಖ್ಯವಾಗುತ್ತದೆ. ನನ್ನ ಜೀವನವೂ ಸಮಾಜಕ್ಕೆ, ರೈತರ ಏಳ್ಗೆಗಾಗಿಯೇ ನನ್ನ ಜೀವನ ಮೀಸಲಿದ್ದು, ನನ್ನ ತಂದೆಯನ್ನು ಆಶೀರ್ವದಿಸಿದಂತೆ ನನ್ನನ್ನೂ ನಾಡಿನ ಜನರು, ಮಠಾಧೀಶರು ಆಶೀರ್ವದಿಸಿ ಎಂದು ಮನವಿ ಮಾಡಿದರು.

Advertisement

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭವಿಷ್ಯದ ದಿನಗಳಲ್ಲಿ ಪ್ರಕೃತಿ ಕರುಣೆ ತೋರಿ, ಉತ್ತಮ ಮಳೆಯಾಗಿ ರೈತರ ಬದುಕು ಸ್ವಾವಲಂಬನೆ, ಸಮೃದ್ಧಿ ಪಡೆಯುವಂತಾಗಲಿ ಎಂದು ಹಾರೈಸಿದರು.

ರಾಜ್ಯದಲ್ಲಿ ಒಂದೆಡೆ ಬರಗಾಲ, ಮತ್ತೊಂದೆಡೆ ರೈತರ ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗಾಗಿ ವಿದ್ಯುತ್ ಅಭಾವ ಸೃಷ್ಟಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next