ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ವಿಲೀನ ವಿರೋಧಿಸಿ ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು. 500ಕ್ಕೂ ಹೆಚ್ಚು ಸಿಂಡಿಕೇಟ್ ಬ್ಯಾಂಕ್ ನೌಕರರು ಭಾಗವಹಿಸಿ ವಿಲೀನ ಪ್ರಕ್ರಿಯೆ ಸಮಂಜಸವಲ್ಲ, ಕೇಂದ್ರ ಸರ್ಕಾರ ನಿಲುವನ್ನು ಹಿಂಪಡೆಯಬೇಕು. ಶತಮಾನದ ಹೊಸ್ತಿಲಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಅನ್ನು ಉಳಿಸಿಕೊಡಬೇಕು ಎಂದು ಘೋಷಣೆ ಕೂಗಿದರು.
ವಿಲೀನ ಪ್ರಕ್ರಿಯೆ ಕುರಿತು ಬ್ಯಾಂಕ್ ಮಂಡಳಿ ಇಂದು ಸಭೆ ನಡೆಸುತ್ತಿದ್ದು, ಇದರ ಹಿನ್ನೆಲೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ಸಾಯಿರಾಂ, ಇಂದು ಬ್ಯಾಂಕ್ ಬೋರ್ಡ್ ಸಭೆ ನಡೆಯುತ್ತಿದ್ದು, ವಿಲೀನ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಲು ಮುಂದಾಗಿದ್ದಾರೆ. ವಿಲೀನವಾದರೆ ಕರ್ನಾಟಕ ಮೂಲದ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್ ಗಲ್ಲಿ ಒಂದೇ ಬ್ಯಾಂಕ್ ಉಳಿಯಲಿದೆ. ದಶಕಗಳಿಂದ ನಷ್ಟದಲ್ಲಿರುವ ಉತ್ತರ ಭಾರತ ಅನೇಕ ಬ್ಯಾಂಕ್ ಗಳನ್ನು ಬಿಟ್ಟು ಲಾಭದಲ್ಲಿದ್ದು, ಉತ್ತಮವಾಗಿ ವಹಿವಾಟು ಹೊಂದಿದ್ದ ಸಿಂಡಿಕೇಟ್ ಬ್ಯಾಂಕ್ ವಿಲೀನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನೊಂದು ಬ್ಯಾಂಕ್ ಅನ್ನು ತನ್ನಲ್ಲೇ ವಿಲೀನ ಮಾಡಿಕೊಳ್ಳುವಷ್ಟು ಸಾಮರ್ಥ್ಯದ ಸಿಂಡಿಕೇಟ್ ಬ್ಯಾಂಕ್ ರಾಜಕೀಯ ಕುತಂತ್ರಕ್ಕೆ ಬಲಿಯಾಗುತ್ತಿದೆ. ಶತಮಾನದ ಹೊಸ್ತಿಲಲ್ಲಿರುವ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗುತ್ತಿವುದು ಎಲ್ಲಾ ನೌಕರರಿಗೂ ನೋವುಂಟು ಮಾಡಿದೆ ಎಂದರು.