Advertisement

ಕೃಷಿ ಮೇಳಕ್ಕೆ ವಿಧ್ಯುಕ್ತ ಚಾಲನೆ

03:54 PM Dec 09, 2017 | Team Udayavani |

ರಾಯಚೂರು: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿಮೇಳಕ್ಕೆ ನವಲಕಲ್‌ ಬೃಹನ್ಮಠದ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯರು, ಗೊಲಪಲ್ಲಿ ಮಠದ ಶ್ರೀ ವರದಾನಂದ ಸ್ವಾಮೀಜಿ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಮಳಿಗೆಗಳ ಉದ್ಘಾಟನೆ ನೆರವೇರಿಸಿದರು. ನೆಲ ಜಲ ಸಿರಿ, ಧಾನ್ಯ ಸಿರಿ, ಜೀವನ ಸಿರಿ ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷವೂ ನಾಲ್ಕು ದಿನಗಳ ಕಾಲ ಮೇಳ ಆಯೋಜಿಸಲಾಗಿದೆ.

Advertisement

ವಿವಿಯಿಂದ ನಡೆಸಿದ ಪ್ರಯೋಗಗಳು, ಸಂಶೋಧನೆಗಳು, ರೈತರಿಗೆ ನೆರವಾಗುವಂಥ ಹಲವು ವಿಚಾರಗಳನ್ನು ಮೇಳಗಳಲ್ಲಿ ಪರಿಚಯಿಸಲಾಗುತ್ತಿದೆ. ಈ ಭಾಗದ ರೈತರಿಗೆ ಪೂರಕ ಮಾಹಿತಿ ನೀಡಲಾಗುತ್ತಿದೆ. ಮುಖ್ಯವಾಗಿ ಈ ಬಾರಿ ಸಾವಯವ ಸಿರಿ ಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಹುತೇಕ ಮಳಿಗೆಗಳಲ್ಲಿ ಸಿರಿ ಧಾನ್ಯಗಳಿಗೆ ಸಂಬಂಧಿಸಿದ ಮಾಹಿತಿ ಪ್ರಸ್ತುತಪಡಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿವಿ ಕುಲಪತಿ ಪಿ.ಎಂ.ಸಾಲಿಮಠ, ವರ್ಷದಿಂದ ವರ್ಷಕ್ಕೆ ಮೇಳಕ್ಕೆ ಬರುವವರ
ಸಂಖ್ಯೆ ಹೆಚ್ಚುತ್ತಿದೆ. ನಾವು ಕೂಡ ರೈತರಿಗೆ ಉಪಯುಕ್ತ ಆಗುವ ರೀತಿಯಲ್ಲಿ ಮೇಳ ಆಯೋಜಿಸಲು ಯತ್ನಿಸುತ್ತಿದ್ದೇವೆ. ಈ ಭಾಗದಲ್ಲಿ ಶೇ.60, 70ರಷ್ಟು ರೈತಾಪಿ ಕುಟುಂಬಗಳೇ ಇವೆ. ಬಹುತೇಕ ಮಳೆಯಾಶ್ರಿತ ಕೃಷಿ ಪದ್ಧತಿಯಿದ್ದು, ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಬರುವಂಥ ತಳಿಗಳನ್ನು ಪರಿಚಯಿಸಲಾಗಿದೆ. ಇದು ಕೇವಲ ಕೃಷಿಕರಿಗೆ ಮಾತ್ರವಲ್ಲ, ಕೃಷಿಯೇತರ ವರ್ಗಗಳಿಗೂ ಸಾಕಷ್ಟು ಮಾಹಿತಿ ನೀಡುವಂತಹ ಮೇಳವಾಗಿದೆ ಎಂದರು.

ಈ ಬಾರಿಯೂ ಸುಮಾರು 2.5 ಲಕ್ಷ ಜನರು ಆಗಮಿಸುವ ನಿರೀಕ್ಷೆ ಹೊಂದಿದ್ದೇವೆ. ಹೈ-ಕ ಭಾಗದ ಆರು ಜಿಲ್ಲೆಗಳಿಂದಲೂ ಕೃಷಿಕರು ಆಗಮಿಸುವರು. ಮೇಳದಲ್ಲಿ 215 ಮಳಿಗೆ ಸ್ಥಾಪಿಸಲಾಗಿದ್ದು, ಈ ಬಾರಿ ಸಿರಿ ಧಾನ್ಯಗಳ ಬಗ್ಗೆ ಹೆಚ್ಚು ಒಲವು ತೋರಿದ್ದೇವೆ. ರೈತರು ಮೇಳದ ಉಪಯೋಗ ಪಡೆಯಬೇಕು ಎಂದರು. ವಿವಿ ಆಡಳಿತ ಮಂಡಳಿ ಸದಸ್ಯರಾದ ಎಂ.ಶೇಖರಗೌಡ, ಅಶೋಕ ಅಲಬನೂರು, ಅಮರೇಶ ಬಲ್ಲಿದ, ಸಂಶೋಧನಾ ನಿರ್ದೇಶಕ ಐ. ಶಂಕರಗೌಡ ಸೇರಿ ಇತರರು ಇದ್ದರು.

ಹಲವು ಕಂಪನಿಗಳು ಕೃಷಿಗೆ ಪೂರಕವಾಗಿ ಕಂಡು ಹಿಡಿದ ನೂತನ ಯಂತ್ರಗಳ ಪ್ರಾತ್ಯಕ್ಷಿಕೆ ಆಯೋಜಿಸಿವೆ. ಮೇವು
ಕಟಾವು ಯಂತ್ರಗಳು, ಭತ್ತ ನಾಟಿ ಯಂತ್ರ, ಔಷಧ ಸಿಂಪರಣೆ ಸೇರಿ ಕಡಿಮೆ ಬೆಲೆಯಲ್ಲಿ ಹೆಚ್ಚು ಕೆಲಸ ಪಡೆಯುವಂಥ
ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅದರೊಟ್ಟಿಗೆ ವಿವಿಧ ಹೊಸ ತಳಿಗಳ ಪರಿಚಯಿಸಲಾಗುತ್ತಿದೆ. ಮೊದಲ ದಿನ ಇನ್ನೂ ಜನರಿಗೆ ಮಾಹಿತಿ ಇರದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಜನ ಬಂದಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next