ಬೆಂಗಳೂರು: ಪರಿಶಿಷ್ಟ ಪಂಗಡ ಸಮುದಾಯಕೆ ಶೇ 7.5ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ವಾಲ್ಮೀಕಿ ಸಮುದಾಯ ಮಂಗಳವಾರ ನಡೆಸಿದ ಭಾರೀ ಪ್ರತಿಭಟನೆಗೆ ವಿಧಾನಸೌಧ ಸೇರಿದಂತೆ ಸುತ್ತಮುತ್ತಲ ಕೇಂದ್ರಭಾಗದಲ್ಲಿ ಭಾರೀ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಹೈರಾಣಾದರು.
ವಾಲ್ಮೀಕಿ ಸಮುದಾಯದ ಮಠಾಧೀಶರ ನೇತೃತ್ವದಲ್ಲಿ ಬೇಡಿಕೆ ಈಡೇರಿಸುವಂತೆ ಪಾದಯಾತ್ರೆಯ ಮೂಲಕ ನಗರಕ್ಕೆ ಆಗಮಿಸಿದ್ದ ಸಹಸ್ರಾರು ಜನರು ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಜಮಾಯಿಸಿದರು. ಅಲ್ಲದೆ ವಿಧಾನಸೌಧ ಮುತ್ತಿಗೆ ಹಾಕುವ ಅವರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಬಳಿಕ ಪ್ರತಿಭಟನೆ ಫ್ರೀಡಂ ಪಾರ್ಕ್‌ಗೆ ಸ್ಥಳಾಂತರಗೊಂಡಿತು. ಶೇಷಾದ್ರಿ ರಸ್ತೆಯಲ್ಲಿಯೇ ಪ್ರತಿಭಟನಾಕಾರರು ಧರಣಿ ಕುಳಿತು ಹಕ್ಕೊತ್ತಾಯ ಮುಂದುವರಿಸಿದರು.
ವಾಲ್ಮೀಕಿ ಸಮುದಾಯದವು ಪ್ರತಿಭಟನೆ ನಡೆಸಲು ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಗರದ ರಸ್ತೆಗಳಿಗೆ ಲಗ್ಗೆಯಿಟ್ಟ ಪರಿಣಾಮ ಕೇಂದ್ರಭಾಗದಲ್ಲಿ ವಾಹನ ಸವಾರರು ತೀವ್ರ ಸಂಚಾರ ದಟ್ಟಣೆ ಎದುರಿಸಬೇಕಾಯಿತು. ಡಾ. ಅಂಬೇಡ್ಕರ್ ರಸ್ತೆ, ರೇಸ್‌ಕೋರ್ಸ್ ರಸ್ತೆ, ಕೆ. ಆರ್ ವೃತ್ತ , ಕುಮಾರಕೃಪ ರಸ್ತೆ, ಜೆ.ಸಿ ರಸ್ತೆ, ಸುತ್ತಮುತ್ತಲ ಭಾಗದಲ್ಲಿ ಭಾರೀ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.
ಅಷ್ಟೇ ಅಲ್ಲದೆ ಮೌರ್ಯವೃತ್ತದಲ್ಲಿ ಪಿಯು ಕಾಲೇಜು ಉಪನ್ಯಾಸಕರ ಸಂಘ ಹಾಗೂ ಮಲ್ಲೇಶ್ವರಂ ವೃತ್ತದ ಕುವೆಂಪು ಪುತ್ಥಳಿ ಮುಂದೆ ಎಬಿವಿಪಿ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆ.ಆರ್.ವೃತ್ತ, ವಿಧಾನಸೌಧ, ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತ, ಆನಂದರಾವ್ ವೃತ್ತ, ಶಿವಾನಂದ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಮೆಜೆಸ್ಟಿಕ್ ಸುತ್ತ ಮುತ್ತ, ಮಲ್ಲೇಶ್ವರ ಹಾಗೂ ಓಕಳಿಪುರಂ ಸೇರಿದಂತೆ ಮುಂತಾದ ಕಡೆಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು. ವಾಹನ ಸವಾರರು ಗಂಟೆಗಳ ಗಟ್ಟಲೆ ರಸ್ತೆಗಳಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ಸಂಚಾರ ಪೊಲೀಸರು ಟ್ರಾಫಿಕ್ ನಿವಾರಣೆ ಮಾಡಲು ಹರಸಾಹಸ ಪಡಬೇಕಾಯಿತು.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಗಳಿಂದ ಉಂಟಾದ ಸಂಚಾರ ದಟ್ಟಣೆ,ವಾಹನ ಸವಾರಿಗೆ ತೊಂದರೆ ಸೃಷ್ಟಿಸಿತ್ತು. ಅರ್ಧ ಕಿಲೋಮೀಟರ್‌ಗೂ ಹೆಚ್ಚು ಕಾಲ ನಿಂತಿದ್ದ ವಾಹನಗಳಲ್ಲಿದ್ದ ಪ್ರಯಾಣಿಕರು ಬಿಸಿಲಿನ ಬೇಗೆಗೆ ಬೆವೆತು ಹೋದರು. ದ್ವಿಚಕ್ರ ವಾಹನವಾರರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೈರಾಣದರು. ರಸ್ತೆದಾಟಲು ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಸಂಜೆ ನಾಲ್ಕು ಗಂಟೆ ಬಳಿಕ ಟ್ರಾಫಿಕ್ ಜಾಮ್ ತೆರವುಗೊಂಡಿತು.