ಆಳಂದ: ಮೊದಲಿದ್ದ ಸ್ಥಳದಲ್ಲೇ ಸರ್ಕಾರಿ ಬಾಲಕಿಯರ ಪಿಯು ತರಗತಿಗಳು ನಡೆಸಬೇಕು ಎಂದು ಆಗ್ರಹಿಸಿ ಸಂಘಟನೆಗಳ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾಲೇಜು ವಿದ್ಯಾರ್ಥಿನಿಯರು ಮತ್ತು ಕನ್ನಡಪರ ಸಂಘಟನೆಗಳ ಅನೇಕ ಕಾರ್ಯಕರ್ತರು ಸೇರಿ ಪ್ರಮುಖ ರಸ್ತೆಗಳ ಮೂಲಕ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಾಲೂಕು ಮತ್ತು ಪಿಯು ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿದರು.
ಕಳೆದ ಸಾಲಿನಲ್ಲಿ ಬೋಧಿಸಿದ ಕಟ್ಟಡದಲ್ಲೇ ತರಗತಿ ನಡೆಸದೆ ಪಟ್ಟಣದಿಂದ ದೂರದ ಪ್ರದೇಶದಲ್ಲಿ ಪ್ರಾರಂಭಿಸಿದ್ದರಿಂದ ವಿದ್ಯಾರ್ಥಿನಿಯರಿಗೆ ತೊಂದರೆ ಅನುಭವಿಸುವಂತಾಗಿದೆ. ಕಳೆದ ಸಾಲಿನ ನಡೆಸಿದಂತೆ ಮೊದಲಿನ ಕಟ್ಟಡದಲ್ಲೇ ತರಗತಿ ನಡೆಸಬೇಕು ಎಂದು ಒತ್ತಾಯಿಸಿದರು.
ಉಪನ್ಯಾಸಕರ ಖಾಲಿ ಹುದ್ದೆಗಳಿಂದಾಗಿ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ. ಉಪನ್ಯಾಸಕರ ಖಾಲಿ ಹುದ್ದೆ ಕೂಡಲೇಭರ್ತಿ ಮಾಡಬೇಕು. ಕಾಲೇಜಿನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಒದಗಿಸಬೇಕು ಹಾಗೂ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಸಂಬಂಸಿದಂತೆ ಪ್ರಯೋಗಾಲಯ ಸ್ಥಾಪಿಸಿ ವಿದ್ಯಾರ್ಥಿನಿಯರ ಶೈಕ್ಷಣಿಕ ವ್ಯವಸ್ಥೆಗೆ ಅನುಕೂಲ ಒದಗಿಸಬೇಕು ಎಂದು ಆಗ್ರಹಿಸಿದರು.
ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ, ನಾಗರಾಜ ಘೋಡಕೆ, ನರೇಶ ಬೋಸ್ಲೆ, ಲಕ್ಷ್ಮೀಕಾಂತ ಉದನೂರ, ಅಮಿತ ಪಾಟೀಲ, ಸಚಿನ ವಾರಿಕ, ಸುನಿಲ ಐರೊಡಗಿ, ಕರಣ ರಾಠೊಡ, ದೌಲಪ್ಪ ವಣದೆ ಮತ್ತು ವಿದ್ಯಾರ್ಥಿನಿಯರಾದ ನಿಖೀತಾ, ಸರೋಜಾ, ಪ್ರೇಮಾ, ಸುಶ್ಮಿತಾ, ರತ್ನಾ, ಶೋಭಾ, ಈರಮ್ಮ, ಅರ್ಪಿತಾ, ಗಂಗಾ, ಸನ್ನಾ, ಕಾವೇರಿ ವಣದೆ, ಪೂಜಾ, ಪ್ರತಿಕ್ಷಾ, ಸ್ವಪ್ನಾ, ಕಾವೇರಿ, ರಾಜೇಶ್ರೀ ಪಾಲ್ಗೊಂಡಿದ್ದರು.