ಹೊಸದಿಲ್ಲಿ : ಪೊಂಗಲ್‌ಗೆ ಮುನ್ನ ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆಯಾದರೂ ಈ ಪರಂಪರಾಗತ ಕ್ರೀಡೆಯನ್ನು ಉಳಿಸಿಕೊಳ್ಳುವ ಸಲುವಾಗಿ ನಿಷೇಧಕ್ಕೆ ಸಡ್ಡು ಹೊಡೆದು ಜಲ್ಲಿಕಟ್ಟು ನಡೆಸಿಯೇ ತೀರುವ ಸನ್ನಾಹದಲ್ಲಿ ತಮಿಳುನಾಡಿನ ಕೆಲವೊಂದು ವರ್ಗದ ಜನರು ಮುಂದಾಗಿರುವುದು ಈಗ ಕಂಡು ಬರುತ್ತಿದೆ.ಇದೇ ವೇಳೆ ರಾಜ್ಯಾದ್ಯಂತ ಜಲ್ಲಿಕಟ್ಟು ನಿಷೇಧಕ್ಕೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ.
ಸ್ಥಳೀಯ ರಾಜಕೀಯ ಪಕ್ಷವೊಂದು ಕಡಲೂರಿನಲ್ಲಿ ಜಲ್ಲಿಕಟ್ಟು ನಡೆಸಿರುವುದನ್ನು ಅನುಸರಿಸಿ ಮಧುರೆಯ ಕರಿಶಕುಳಂನಲ್ಲಿ ಕೆಲವು ಜನರು ಗುಂಪು ನಿಷೇಧಕ್ಕೆ ಸಡ್ಡು ಹೊಡೆದು ಜಲ್ಲಿಕಟ್ಟು ನಡೆಸಿರುವುದು ವರದಿಯಾಗಿದೆ.
ಜಲ್ಲಿಕಟ್ಟು ನಿಷೇಧದ ಉಲ್ಲಂಘನೆಗಾಗಿ ಕಡಲೂರಿನ ನಮ್ ತಮಿಳರ್ ಕಚ್ಚಿ ಪಕ್ಷದ 28 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಂಗಲ್ ಪ್ರಯುಕ್ತ ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಸುವುದು ವಾಡಿಕೆ. ಇದೇ ಶನಿವಾರದಿಂದ ಪೊಂಗಲ್ ಸಂಭ್ರಮ ಆರಂಗೊಳ್ಳಲಿದ್ದು ಜಲ್ಲಿಕಟ್ಟು ನಡೆಸಲೇಬೇಕೆಂಬ ಕೂಗಿಗೆ ವಿದ್ಯಾರ್ಥಿಗಳ ಸಹಿತ ಸಮಾಜದ ಹಲವಾರು ವರ್ಗಗಳ ಜನರು ತೀವ್ರ ಉತ್ಸುಕತೆ ತೋರುತ್ತಿದ್ದಾರೆ.
ಅಂತೆಯೇ ಜಲ್ಲಿಕಟ್ಟು ಮೇಲಿನ ನಿಷೇಧದ ತೆರವಿಗೆ ರಾಜ್ಯಾದ್ಯಂತ ಪ್ರತಿಭಟನೆಗಳು ಆರಂಭವಾಗಿದೆ. ಜಲ್ಲಿಕಟ್ಟು ಪ್ರಸಿದ್ಧವಲ್ಲದ ಸ್ಥಳಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ.
ತಮಿಳು ನಾಡು ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ತಾವೇ ಖುದ್ದಾಗಿ “ತಮಿಳುನಾಡು ಸರಕಾರ ಜಲ್ಲಿಕಟ್ಟು ನಡೆಸಿಯೇ ತೀರುವುದಲ್ಲದೆ ಈ ವಿಷಯದಲ್ಲಿ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ’ ಎಂದು ಈಗಾಗಲೇ ಹೇಳಿದ್ದಾರೆ.